2023ರಲ್ಲಿ ಸುಮಾರು 4 ಕೋಟಿ ಎಚ್‌ಐವಿ ಸೋಂಕಿತರು: ವಿಶ್ವಸಂಸ್ಥೆ
ಹೊಸದಿಲ್ಲಿ: 2023ರಲ್ಲಿ ಏಡ್ಸ್ ಗೆ ಕಾರಣವಾಗುವ ಎಚ್‌ಐವಿ ವೈರಸ್‌ನೊಂದಿಗೆ ಸುಮಾರು 4 ಕೋಟಿ ಜನರು ಜೀವಿಸುತ್ತಿದ್ದರು. ಅವರಲ್ಲಿ 90 ಲಕ್ಷ ಜನರು ಯಾವುದೇ ಚಿಕಿತ್ಸೆ ಪಡೆಯಲಿಲ್ಲ. ಇದರ ಪರಿಣಾಮ ಪ್ರತಿ ನಿಮಿಷಕ್ಕೆ ಒಬ್ಬರು ಏಡ್ಸ್ ಗೆ ಸಂಬಂಧಿಸಿದ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಏಯ್ಡ್ಸ್ ಅನ್ನು ಕೊನೆಗೊಳಿಸುವಲ್ಲಿ ಪ್ರಗತಿಯಾಗಿದೆ ಎಂದು ಹೇಳಿರುವ ವರದಿ, ಮಧ್ಯ ಪ್ರಾಚ್ಯ ಹಾಗೂ ಉತ್ತರ ಆಫ್ರಿಕಾ, ಪೂರ್ವ ಯುರೋಪ್ ಹಾಗೂ ಮಧ್ಯ ಏಷಿಯಾ ಹಾಗೂ ಲ್ಯಾಟೀನ್ ಅಮೆರಿಕ-ಈ ಮೂರು ಪ್ರದೇಶಗಳಲ್ಲಿ ಪ್ರಗತಿ ನಿಧಾನಗತಿಯಾಗುತ್ತಿದೆ, ನಿಧಿ ಕಡಿಮೆಯಾಗುತ್ತಿದೆ ಹಾಗೂ ಹೊಸ ಸೋಂಕು ಹೆಚ್ಚುತ್ತಿದೆ ಎಂದು ಹೇಳಿದೆ.
2023ರಲ್ಲಿ ಸುಮಾರು 630,000 ಜನರು ಏಡ್ಸ್ ಸಂಬಂಧಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. 2004ರಲ್ಲಿ ಏಡ್ಸ್ ನಿಂದ 21 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಹೋಲಿಸಿದರೆ ಕಳೆದ ವರ್ಷ ಸಾವಿನ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಆದರೆ, ಇತ್ತೀಚೆಗಿನ ಅಂಕಿ-ಅಂಶದ ಪ್ರಕಾರ 2025ರ ಗುರಿಯಾಗಿರುವ 250,000 ಗುರಿಗಿಂತ ದುಪ್ಪಟ್ಟಾಗಿರಲಿದೆ ಗಲಿದೆ ಎಂದು ಯುಎನ್‌ಎಐಡಿಎಸ್‌ನ ವರದಿ ಹೇಳಿದೆ.
ಲಿಂಗ ಅಸಮಾನತೆ ಬಾಲಕಿಯರು ಹಾಗೂ ಮಹಿಳೆಯರಲ್ಲಿ ಇದರ ಅಪಾಯ ಉಲ್ಬಣವಾಗಲು ಕಾರಣವಾಗಿದೆ ಎಂದು ಹೇಳಿರುವ ವರದಿ, ಆಫ್ರಿಕಾದ ಭಾಗಗಳಲ್ಲಿ ಹದಿಹರೆಯದ ಹಾಗೂ ಯುವತಿಯರಲ್ಲಿ ಎಚ್‌ಐವಿಯ ಅತ್ಯಧಿಕ ಪ್ರಕರಣಗಳು ಕಂಡು ಬಂದಿರುವುದನ್ನು ಉಲ್ಲೇಖಿಸಿದೆ.
ಹೊಸ ಸೋಂಕಿನ ಪ್ರಮಾಣ ಜಾಗತಿಕ ಮಟ್ಟದಲ್ಲಿ 2010ರಲ್ಲಿ ಶೇ. 45 ಇದ್ದುದು, 2023ರಲ್ಲಿ ಶೇ. 55ಕ್ಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
‘‘ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆ ಒಡ್ಡುತ್ತಿರುವ ಏಡ್ಸ್ ಅನ್ನು 2030ರ ವೇಳೆಗೆ ಅಂತ್ಯಗೊಳಿಸಲು ಜಾಗತಿಕ ನಾಯಕರು ಪ್ರತಿಜ್ಞೆ ಮಾಡಿದ್ದಾರೆ’’ ಎಂದು ಯುಎನ್‌ಎಐಡಿಎಸ್‌ನ ಕಾರ್ಯಕಾರಿ ನಿರ್ದೇಶಕ ವಿನ್ನಿ ಬಿಯಾನಿಮಾ ಹೇಳಿದ್ದಾರೆ.