ನೀಟ್ ; ಕೇಂದ್ರ ಸರಕಾರಕ್ಕೆ ಸಿಎಂ ಸ್ಟಾಲಿನ್ ತರಾಟೆ

Update: 2023-09-21 14:29 GMT

ಎಂ.ಕೆ. ಸ್ಟಾಲಿನ್| Photo: PTI 

ಚೆನ್ನೈ: ನೀಟ್ ಕುರಿತಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ನೀಟ್ ನಿಂದ ಯಾವುದೇ ಪ್ರಯೋಜನ ಇಲ್ಲ. ನೀಟ್ ಹಾಗೂ ಪ್ರತಿಭೆ ನಡುವೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಕೇಂದ್ರ ಸರಕಾರವೇ ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ನೀಟ್ ಕುರಿತಂತೆ ತನ್ನ ಪುತ್ರ ಹಾಗೂ ರಾಜ್ಯ ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಅವರು ಕೇಂದ್ರ ಸರಕಾರವನ್ನು ತರಾಟೆಗೆ ತೆಗದುಕೊಂಡ ಒಂದು ದಿನದ ಬಳಿಕ ಸ್ಟಾಲಿನ್, ನೀಟ್ ಪ್ರಯೋಜನ ಶೂನ್ಯ ಎಂಬುದನ್ನು ಕೇಂದ್ರದ ಬಿಜೆಪಿ ಸರಕಾರವೇ ಒಪ್ಪಿಕೊಂಡಿದೆ ಎಂದಿದ್ದಾರೆ. ‘ಎಕ್ಸ್’ (ಈ ಹಿಂದಿನ ಟ್ವಿಟರ್)ನಲ್ಲಿ ಸ್ಟಾಲಿನ್, ‘‘ನೀಟ್ ಪಿಜಿ ಕಟ್ ಆಫ್ ಅನ್ನು ಶೂನ್ಯಕ್ಕೆ ಇಳಿಸುವ ಮೂಲಕ ಅವರು ನೀಟ್ ನಲ್ಲಿ ಅರ್ಹತೆಗೆ ಅರ್ಥವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಈ ಪರೀಕ್ಷೆಯನ್ನು ಕೇವಲ ಕೋಚಿಂಗ್ ಸೆಂಟರ್ ಗಾಗಿ ಹಾಗೂ ಪರೀಕ್ಷೆ ಶುಲ್ಕ ಪಾವತಿಸುವುದಕ್ಕೆ ಮಾತ್ರ ನಡೆಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಅರ್ಹತೆ ಅಗತ್ಯವಿಲ್ಲ’’ ಎಂದಿದ್ದಾರೆ.

ಹಲವು ಅಮೂಲ್ಯ ಜೀವಗಳನ್ನು ಕಳೆದುಕೊಂಡ ಹೊರತಾಗಿಯೂ ಕೇಂದ್ರದ ಬಿಜೆಪಿ ಸರಕಾರ ಹೃದಯ ಹೀನವಾಗಿದೆ. ಅದು ಈಗ ಇಂತಹ ಆದೇಶದೊಂದಿಗೆ ಬಂದಿದೆ. ನೀಟ್ ಎಂದು ಕರೆಯಲಾಗುವ ‘ಗಿಲ್ಲೋಟಿನ್’ (ಮನುಷ್ಯರನ್ನು ಕೊಲ್ಲುವ ಯಂತ್ರ)ನಲ್ಲಿ ವಿದ್ಯಾರ್ಥಿಗಳು ಸಾಯುವಂತೆ ಮಾಡಿರುವ ಕಾರಣಕ್ಕಾಗಿ ಬಿಜೆಪಿ ಸರಕಾರವನ್ನು ತೆಗೆದು ಹಾಕಬೇಕಾಗಿದೆ ಎಂದು ಅವರು ಹೇಳಿದ್ದಾರೆ.

2023ರ ಪಿಜಿ ನೀಟ್ ಕೌನ್ಸೆಲಿಂಗ್ ಗೆ ಅರ್ಹರಾಗಲು ಬೇಕಾಗುವ ಶೇಕಡವಾರು ಅಂಕವನ್ನು ಕೇಂದ್ರ ಸರಕಾರ ಶೂನ್ಯಕ್ಕೆ ಇಳಿಸಿರುವುದು ನೀಟ್ ನ ಪಿತೂರಿಯನ್ನು ಬಹಿರಂಗಪಡಿಸಿದೆ ಎಂದು ಉದಯನಿಧಿ ಸ್ಟಾಲಿನ್ ಬುಧವಾರ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News