"ಸ್ವಂತ ನಾಗರಿಕರಿಗೆ ಆದ್ಯತೆ ನೀಡುವ ಅಗತ್ಯವಿದೆ": ರೋಹಿಂಗ್ಯ ನಿರಾಶ್ರಿತರಿಗೆ ದೇಶದಲ್ಲಿ ವಾಸಿಸಲು ಅವಕಾಶ ಕೋರಿದ ಅರ್ಜಿಗೆ ಕೇಂದ್ರದ ಪ್ರತಿಕ್ರಿಯೆ
ಹೊಸದಿಲ್ಲಿ: ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯಿರುವ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಭಾರತವು ತನ್ನ ಸ್ವಂತ ನಾಗರಿಕರಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿರುವ ಕೇಂದ್ರ ಸರ್ಕಾರ, ರೋಹಿಂಗ್ಯ ನಿರಾಶ್ರಿತರ ಅಕ್ರಮ ವಲಸೆ ಮತ್ತು ಭಾರತದಲ್ಲಿ ಉಳಿಯುವಿಕೆಯು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಫಾರಿನರ್ಸ್ ಆ್ಯಕ್ಟ್ ಅನ್ನು ಉಲ್ಲಂಘಿಸಿದ್ದಾರೆಂಬ ಆರೋಪ ಹೊತ್ತಿರುವ ರೋಹಿಂಗ್ಯ ನಿರಾಶ್ರಿತರನ್ನು ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಕೋರುವ ಅರ್ಜಿಗೆ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರ ಮೇಲಿನಂತೆ ತನ್ನ ಅಫಿಡವಿಟ್ ಅನ್ನು ಬುಧವಾರ ಸಲ್ಲಿಸಿದೆ.
ಭಾರತವು 1951 ರೆಫ್ಯೂಜಿ ಕನ್ವೆನ್ಶನ್‌ಗೆ ಹಾಗೂ ಸ್ಟೇಟಸ್ ಆಫ್ ರೆಫ್ಯೂಜೀಸ್ 1967 ಗೆ ಸಂಬಂಧಿಸಿದ ಶಿಷ್ಟಾಚಾರಕ್ಕೆ ಸಹಿ ಹಾಕಿಲ್ಲ, ಈ ಕಾರಣ ಯಾವ ವರ್ಗದ ವ್ಯಕ್ತಿಗಳನ್ನು ನಿರಾಶ್ರಿತರೆಂದು ಪರಿಗಣಿಸಬೇಕೆಂಬುದು ಸಂಪೂರ್ಣವಾಗಿ ಒಂದು ನೀತಿ ಸಂಬಂಧಿ ನಿರ್ಧಾರವಾಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
"ರೋಹಿಂಗ್ಯ ವಲಸಿಗರಿಗೆ ದೇಶದಲ್ಲಿ ವಾಸಿಸುವ ಹಕ್ಕು ಒದಗಿಸಬೇಕೆಂಬುದು ಸಂವಿಧಾನದ ವಿಧಿ 19 (ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ)ಇದರ ಉಲ್ಲಂಘನೆಯಾಗಿದೆ. ಏಕೆಂದರೆ ಈ ವಿಧಿಯು ದೇಶದ ನಾಗರಿಕರಿಗೆ ಮಾತ್ರ ಅನ್ವಯವಾಗುತ್ತದೆ ಮತ್ತು ವಿದೇಶಿಗರಿಗೆ ಅದನ್ನು ಅನ್ವಯಿಸಲಾಗದು,” ಎಂದು ಕೇಂದ್ರ ಹೇಳಿದೆ.
“ರೋಹಿಂಗ್ಯರನ್ನು ಅಕ್ರಮ ವಲಸಿಗರೆಂದು ಒಪ್ಪಿಕೊಂಡಾಗ ಫಾರಿನರ್ಸ್ ಆ್ಯಕ್ಟ್ 1946 ಇದರ ನಿಬಂಧನೆಗಳು ಅವರಿಗೆ ಅನ್ವಯವಾಗುತ್ತದೆ,” ಎಂದು ಹೇಳಿರುವ ಕೇಂದ್ರ, ಅರ್ಜಿದಾರರ ಕೋರಿಕೆಯು ಈ ಕಾಯಿದೆಯನ್ನೇ ತಡೆಹಿಡಿಯುವುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.