ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಗೆ ಜೆಪಿಸಿ ಸಮನ್ಸ್ ಸಾಧ್ಯತೆ
ಹೊಸದಿಲ್ಲಿ : ಸೆಬಿ ಅಧ್ಯಕ್ಷೆ ಮಾಧವಿ ಬುಚ್ ವಿರುದ್ಧ ಹಿತಾಸಕ್ತಿಗಳ ಸಂಘರ್ಷದ ಆರೋಪಗಳು ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿರುವ ನಡುವೆಯೇ ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು , ಸಂಸದೀಯ ಕಾಯ್ದೆಗಳ ಮೂಲಕ ಸ್ಥಾಪನೆಯಾಗಿರುವ ಶಾಸನಾತ್ಮಕ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಮರುಪರಿಶೀಲಿಸಲು ನಿರ್ಧರಿಸಿದೆ.
ಬುಚ್ ವಿರುದ್ಧದ ಆರೋಪಗಳ ಪರಿಶೀಲನೆಗಾಗಿ ಬುಚ್ ಅವರನ್ನು ವಿಚಾರಣೆಗೆ ಕರೆಸಿಕೊಳ್ಳುವ ನಿರ್ಧಾರವನ್ನು ಸಮಿತಿಯು ಕೈಗೊಳ್ಳಲಿದೆಯೆಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಅಧ್ಯಕ್ಷ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ತಿಳಿಸಿದರು.
ಸಂಸದೀಯ ಕಾಯ್ದೆಗಳ ಮೂಲಕ ಸ್ಥಾಪಿತವಾದ ಶಾಸನಾತ್ಮಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಶಾಸನಾತ್ಮಕ ಸಂಸ್ಥೆಗಳು ಪರಾಮರ್ಶೆ ನಡೆಸಲೂ ಜಂಟಿ ಸಂಸದೀಯ ಸಮಿತಿಯು ಸ್ವಯಂಪ್ರೇರಿತವಾಗಿ ತೀರ್ಮಾನಿಸಿದೆ. ಬ್ಯಾಂಕಿಂಗ್ ಹಾಗೂ ವಿಮಾ ವಲಯದಲ್ಲಿ ಸುಧಾರಣೆಗಳು, ಕೇಂದ್ರೀಯ ಪ್ರಾಯೋಜಿತ ಕಲ್ಯಾಣ ಯೋಜನೆಗಳ ಅನುಷ್ಠಾನ, ಇಂಧನ ಕ್ಷೇತ್ರದಲ್ಲಿ ಪರಿವರ್ತನೆ ತರಲು ಜಾರಿಗೊಳಿಸಲಿರುವ ನೀತಿಯೋಜನೆಗಳು, ಶುಲ್ಕ, ತೆರಿಗೆ, ಬಳಕೆದಾರರ ಶುಲ್ಕಗಳು, ಸಾರ್ವಜನಿಕ ಮೂಲಸೌಕರ್ಯಗಳ ಮೇಲಿನ ಶುಲ್ಕಗಳ ಹೇರಿಕೆಯ ಬಗೆಗೂ ಅದು ಚರ್ಚಿಸಲಿದೆ ಎಂದು ವೇಣುಗೋಪಾಲ್ ತಿಳಿಸಿದರು.
ಅದಾನಿ ಗ್ರೂಪ್ ವಿರುದ್ಧ ಶೇರು ಮಾರಾಟ (ಶಾರ್ಟ್ ಸೆಲ್ಲರ್) ಸಂಸ್ಥೆ ಹಿಂಡೆನ್ಬರ್ಗ್ ಆರೋಪಗಳ ತನಿಖೆ ನಡೆಸುತ್ತಿರುವ ಭಾರತೀಯ ಶೇರು ನಿಯಂತ್ರಣ ಮಂಡಳಿ (ಸೆಬಿ)ಯ ಅಧ್ಯಕ್ಷೆ ಬುಚ್ ಅವರು ಹಿತಾಸಕ್ತಿಯ ಸಂಘರ್ಷದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಬುಚ್ ಅವರು ಸೆಶಲ್ಸ್, ಮಾರಿಶಸ್ ಮತ್ತಿತರ ಸಾಗರೋತ್ತರ ದೇಶಗಳಲ್ಲಿರುವ ಅದಾನಿಯ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದರೆಂದು ಹಿಂಡೆನ್ಬರ್ಗ್ ಆಪಾದಿಸಿದೆ.
ಬುಚ್ ಅವರು ಸೆಬಿಯ ಪೂರ್ಣಾವಧಿಯ ಸದಸ್ಯೆಯಾದ ಬಳಿಕ ಅವರ ಹಿಂದಿನ ಮಾಲಕ ಸಂಸ್ಥೆಯಾದ ಐಸಿಐಸಿಐ ಬ್ಯಾಂಕ್, ಆಕೆಗೆ ಹಣಪಾವತಿಗಳನ್ನು ಮಾಡಿರುವುದನ್ನು ಕಾಂಗ್ರೆಸ್ ಪಕ್ಷವು ಪ್ರಶ್ನಿಸಿದೆ ಹಾಗೂ ಈ ಬಗ್ಗೆಯೂ ಸ್ವತಂತ್ರ ತನಿಖೆಯನ್ನು ನಡೆಸಬೇಕೆಂದು ಅದು ಆಗ್ರಹಿಸಿದೆ.