ಕೇಂದ್ರ ಬಜೆಟ್ ಕುರಿತು ಚರ್ಚಿಸಲು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್

Update: 2024-07-29 15:07 GMT

ನಿರ್ಮಲಾ ಸೀತಾರಾಮನ್ | Credit: X/@pallavict

ಹೊಸದಿಲ್ಲಿ: ಕೇಂದ್ರ ಬಜೆಟ್ ಕುರಿತು ತಮ್ಮ ಕಳವಳಗಳನ್ನು ಹಂಚಿಕೊಳ್ಳುವಂತೆ ಇನ್ಸ್ಟಾಗ್ರಾಮ್, ಯೂಟ್ಯೂಬ್ ಹಾಗೂ ಎಕ್ಸ್ ಸಾಮಾಜಿಕ ಮಾಧ್ಯಮಗಳಲ್ಲಿನ ಇನ್ಫ್ಲುಯೆನ್ಸರ್ ಗಳಿಗೆ ಜುಲೈ 28ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ.

ಜುಲೈ 23ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ತೀವ್ರ ಟೀಕೆಗೆ ಗುರಿಯಾಗಿದೆ.

ಈ ಬಜೆಟ್ ಅನ್ನು ಕುರ್ಚಿ ಉಳಿಸಿಕೊಳ್ಳುವ ಕಸರತ್ತು ಎಂದು ಬಣ್ಣಿಸಿರುವ ವಿರೋಧ ಪಕ್ಷಗಳು, ಬಿಜೆಪಿಯ ಮಿತ್ರಪಕ್ಷಗಳು, ಮುಖ್ಯವಾಗಿ ಟಿಡಿಪಿ ಹಾಗೂ ಜೆಡಿಯುವನ್ನು ಸಂತುಷ್ಟಗೊಳಿಸಲು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ವಾಗ್ದಾಳಿ ನಡೆಸಿವೆ.

ಆದರೆ, ಕೈಗಾರಿಕೋದ್ಯಮಿಗಳು ಮಾತ್ರ ಈ ಬಜೆಟ್ ಅನ್ನು ಎಲ್ಲರನ್ನೂ ಒಳಗೊಳ್ಳುವ ಬಜೆಟ್ ಎಂದು ಪ್ರಶಂಸಿಸಿದ್ದು, ಈ ಬಜೆಟ್ ನಿಂದ ದೇಶದ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಉಪ್ರಕ್ರಮವನ್ನು ಶ್ಲಾಘಿಸಿರುವ ಪಲ್ಲವಿ ಸಿ.ಟಿ. ಎಂಬುವವರು, “ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಮ್, ಯೂಟ್ಯೂಬ್, ಎಕ್ಸ್ ಹಾಗೂ ಇನ್ನಿತರ ಸಾಮಾಜಿಕ ಮಾಧ್ಯಟಮ ವೇದಿಕೆಗಳ ಮೂಲಕ ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉನ್ನತ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳೊಂದಿಗೆ ಭೇಟಿಯಾಗಿದ್ದಕ್ಕೆ ನಿಜಕ್ಕೂ ಧನ್ಯಳಾಗಿದ್ದೇನೆ. ಅಲ್ಲಿ ಅವರು ನಮ್ಮ ಕಳವಳ, ನಮ್ಮ ಸಲಹೆಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು ಹಾಗೂ ಅವಕ್ಕೆ ಮುಕ್ತವಾಗಿ ಉತ್ತರಿಸಿದರು” ಎಂದು ಬರೆದುಕೊಂಡಿದ್ದಾರೆ.

ಆದರೆ, ಸರಕಾರವು ಕೇವಲ ಬಲಪಂಥೀಯ ಇನ್ಫ್ಲುಯೆನ್ಸರ್ ಗಳನ್ನು ಮಾತ್ರ ಭೇಟಿ ಮಾಡುತ್ತಿದೆ ಎಂಬ ಟೀಕೆಗಳು ಸಾಮಾಜಿಕ ಮಾಧ್ಯಾಮಗಳಲ್ಲಿನ ನೆಟ್ಟಿಗರಿಂದ ಕೇಳಿ ಬಂದಿದೆ. ಪಲ್ಲವಿ ಸಿ.ಟಿ. ಅವರ ಎಕ್ಸ್ ವೈಯಕ್ತಿಕ ವಿವರಗಳ ಪ್ರಕಾರ, ಅವರು ಬಿಜೆಪಿಯ ಮುಂಬೈ ಘಟಕದ ಐಟಿ ವಿಭಾಗದ ಸಹ ಸಂಚಾಲಕರಾಗಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳ ಸಭೆಯಲ್ಲಿ ಭಾಗಿಯಾಗಿದ್ದ @MumbaichaDon ಖಾತೆಯಿಂದ ಟ್ವೀಟ್ ಮಾಡುವ ಬಳಕೆದಾರರು ಕೂಡಾ ಮತ್ತೊಬ್ಬ ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಎಂದು ಹೇಳಲಾಗಿದೆ.

ಆದರೆ, ಮತ್ತೊಬ್ಬ ಬಳಕೆದಾರರು, “ಸಾಮಾಜಿಕ ಮಾಧ್ಯಮಗಳು ಅಧಿಕ ಪ್ರಮಾಣದ ತೆರಿಗೆಗಾಗಿ ನಿರ್ಮಲಾ ಸೀತಾರಾಮನ್ ಅವರನ್ನು ನಿಜಕ್ಕೂ ಅತ್ಯಂತ ಕೆಟ್ಟದಾಗಿ ಟ್ರೋಲ್ ಮಾಡುತ್ತಿವೆ. ಆದರೆ, ಅಧಿಕ ತೆರಿಗೆಯನ್ನು ಸರಿಪಡಿಸುವ ಬದಲು, ನಿರ್ಮಲಾ ಸೀತಾರಾಮನ್ ತಮ್ಮ ಇಮೇಜ್ ಅನ್ನು ಸರಿಪಡಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮಮದಲ್ಲಿ

 ಪೋಸ್ಟ್ ಮಾಡಿರುವ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್, “ಹಲವು ಬಲಪಂಥೀಯ ಖಾತೆಗಳು ಸೇರಿದಂತೆ ಇಡೀ ದೇಶವು ಇತ್ತೀಚಿನ ಬಜೆಟ್ ಕುರಿತು ನಿರ್ಮಲಾ ಸೀತಾರಾಮನ್ ಅವರನ್ನು ದೂಷಿಸಲು ಪ್ರಾರಂಭಿಸಿರುವುದರಿಂದ, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲು ಬಲಪಂಥೀಯ ಇನ್ಫ್ಲುಯೆನ್ಸರ್ ಗಳನ್ನು ಆಹ್ವಾನಿಸಲಾಗಿದೆ. ನೀವೀಗ ಬಜೆಟ್ ಎಷ್ಟು ಉತ್ತಮವಾಗಿದೆ ಎಂಬ ನಿರೂಪಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಲಿದ್ದೀರಿ” ಎಂದು ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News