1995ರ ನಂತರ ಗುಜರಾತ್ ನಲ್ಲಿ ಯಾವುದೇ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿಲ್ಲ: ರಾಜ್ಯ ಬಿಜೆಪಿ ಸರಕಾರ ಹೇಳಿಕೆ

Update: 2024-03-02 13:51 GMT

Bhavnagar Government Medical College. Photo: gmcbhavnagar.edu.in.

ಹೊಸದಿಲ್ಲಿ: 1995ರ ನಂತರ ಗುಜರಾತ್ ರಾಜ್ಯದಲ್ಲಿ ಯಾವುದೇ ಸರಕಾರಿ ವೈದ್ಯಕೀಯ ಕಾಲೇಜಿನ ಸ್ಥಾಪನೆ ಮಾಡಲಾಗಿಲ್ಲ ಎಂದು ಗುಜರಾತ್ ರಾಜ್ಯ ಸರಕಾರವು ವಿಧಾನಸಭೆಗೆ ತಿಳಿಸಿದೆ. ಆದರೆ, ಕಳೆದ ವರ್ಷ 2023ರಲ್ಲಿ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸ್ಥಾಪಿಸಲಾಗಿರುವ 508 ನೂತನ ಶುಶ್ರೂಷೆ ತರಬೇತಿ ಶಾಲೆಗಳ ಪೈಕಿ ಕೇವಲ ಒಂದು ಶಾಲೆ ಮಾತ್ರ ರಾಜ್ಯ ಸರಕಾರದ್ದಾಗಿದೆ ಎಂದು ವಿಧಾನಸಭೆಗೆ ತಿಳಿಸಲಾಗಿದೆ ಎಂದು The New Indian Express ವರದಿ ಮಾಡಿದೆ.

ಕೆಲ ಅವಧಿಯನ್ನು ಹೊರತು ಪಡಿಸಿದರೆ 1995ರಿಂದ ನಿರಂತರವಾಗಿ ಅಧಿಕಾರದಲ್ಲಿರುವ ಬಿಜೆಪಿ ರಾಜ್ಯ ಸರಕಾರವು, ರಾಜ್ಯದಲ್ಲಿ ಅಲ್ಲಿಂದ ಕೇವಲ ಆರು ಸರಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದೆ. ಈ ಪೈಕಿ ಮೊದಲ ವೈದ್ಯಕೀಯ ಕಾಲೇಜನ್ನು ಅಹಮದಾಬಾದ್ ನಲ್ಲಿ 1871ರಲ್ಲಿ ಸ್ಥಾಪನೆ ಮಾಡಲಾಗಿದ್ದರೆ, ಕೊನೆಯ ವೈದ್ಯಕೀಯ ಕಾಲೇಜನ್ನು 1995ರಲ್ಲಿ ಭಾವನಗರದಲ್ಲಿ ಸ್ಥಾಪನೆ ಮಾಡಲಾಗಿದೆ.

ಫೆಬ್ರವರಿ 29ರಂದು ಕಾಂಗ್ರೆಸ್ ಶಾಸಕ ಅಮಿತ್ ಚಾವ್ಡಾ ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಲಾಗಿದ್ದು, 2022 ಅಥವಾ 2023ರಲ್ಲಿ ಯಾವುದೇ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮತಿ ನೀಡಲಾಗಿಲ್ಲ ಎಂದೂ ಮಾಹಿತಿ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News