ಅಗ್ನಿವೀರರ ಅಂತ್ಯಕ್ರಿಯೆಗಿಲ್ಲವೇ ಸೇನಾ ಗೌರವ?: ಪಂಜಾಬ್ ನಲ್ಲಿ ವಿವಾದ ಭುಗಿಲೆದ್ದ ನಂತರ ಸ್ಪಷ್ಟೀಕರಣ ನೀಡಿದ ಸೇನೆ

Update: 2023-10-15 11:37 GMT

Photo : indianexpress

ಚಂಡೀಗಢ: ಅಕ್ಟೋಬರ್ 11ರಂದು ಜಮ್ಮು ಮತ್ತು ಕಾಶ‍್ಮೀರದಲ್ಲಿ ಮೃತಪಟ್ಟ ಅಗ್ನಿವೀರ್ ಯೋಧ ಅಮೃತ್ ಪಾಲ್ ಸಿಂಗ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸೇನಾ ಗೌರವ ನೀಡದ ಸೇನೆಯ ಕ್ರಮದ ಕುರಿತು ಶನಿವಾರ ವಿರೋಧ ಪಕ್ಷಗಳು ತೀವ್ರ ಆಘಾತ ವ್ಯಕ್ತಪಡಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಈ ಕುರಿತು ಸ್ಪಷ್ಟೀಕರಣ ನೀಡಿರುವ ಸೇನೆಯು, ಅಮೃತ್ ಪಾಲ್ ಸಿಂಗ್ ಮರಣಕ್ಕೆ ಸ್ವಯಂ ಗುಂಡು ಹಾರಿಸಿಕೊಂಡಿರುವುದು ಕಾರಣವಾಗಿರುವುದರಿಂದ ಚಾಲ್ತಿಯಲ್ಲಿರುವ ನೀತಿಯ ಪ್ರಕಾರ ಸೇನಾ ಗೌರವವನ್ನು ನೀಡುವುದಾಗಲಿ ಅಥವಾ ಸೇನಾ ಅಂತ್ಯಕ್ರಿಯೆಯನ್ನು ಮಾಡಲಾಗಲಿ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಷಯದ ಕುರಿತು ಕೇಂದ್ರ ಸರ್ಕಾರಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡಾ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮಾನ್, ಅಮೃತ್ ಪಾಲ್ ಸಿಂಗ್ ಹುತಾತ್ಮರಾಗಿರುವ ಕುರಿತು ಸೇನೆಯದ್ದು ಅದರದ್ದೇ ಆದ ನೀತಿಯಿರಬಹುದು. ಆದರೆ, ನಮ್ಮ ಸರ್ಕಾರದ ಹುತಾತ್ಮರ ಕುರಿತ ನೀತಿಯು ಹಾಗೇ ಮುಂದುವರಿಯಲಿದೆ ಹಾಗೂ ರಾಜ್ಯದ ನೀತಿಯ ಪ್ರಕಾರ, ಯೋಧರ ಕುಟುಂಬಕ್ಕೆ ರೂ. ಒಂದು ಕೋಟಿ ಪರಿಹಾರ ಧನ ಒದಗಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಇದರೊಂದಿಗೆ ಅಮೃತ್ ಪಾಲ್ ಸಿಂಗ್ ದೇಶದ ಹುತಾತ್ಮ ಯೋಧ ಎಂದೂ ಬಣ್ಣಿಸಿದ್ದಾರೆ.

ಪೂಂಚ್ ವಲಯದಲ್ಲಿ ಜಮ್ಮು ಮತ್ತು ಕಾಶ‍್ಮೀರ ರೈಫಲ್ಸ್ ನ ತುಕಡಿಯಲ್ಲಿ ಸೇವೆ ನಿರ್ವಹಿಸುತ್ತಿದ್ದ ಅಮೃತ್ ಪಾಲ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಪಂಜಾಬ್ ರಾಜ್ಯದ ಮಾನ್ಸಾ ಜಿಲ್ಲೆಯ ಅವರ ತವರು ಗ್ರಾಮದಲ್ಲಿ ನೆರವೇರಿಸಲಾಯಿತು.

ಅಗ್ನಿವೀರ್ ಯೋಧ ಅಮೃತ್ ಪಾಲ್ ಸಿಂಗ್ ಗೆ ಸೇನಾ ಗೌರವ ನೀಡದ ಕುರಿತು ಶಿರೋಮಣಿ ಅಕಾಲಿ ದಳ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಹರ್ ಸಿಮ್ರತ್ ಕೌರ್ ಬಾದಲ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿರುವ ಅವರು, ಎಲ್ಲ ಹುತಾತ್ಮ ಯೋಧರಿಗೆ ಸೇನಾ ಗೌರವ ನೀಡಲು ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿದ್ದಾರೆ.

ಇವರೊಂದಿಗೆ ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ, ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಂ ಸಿಂಗ್ ಮಜಿತಿಯಾ ಕೂಡಾ ಅಗ್ನಿವೀರ್ ಯೋಧ ಅಮೃತ್ ಪಾಲ್ ಸಿಂಗ್ ಗೆ ಸೇನಾ ಗೌರವ ನೀಡದ ಸೇನೆಯ ಕ್ರಮವನ್ನು ಆಕ್ಷೇಪಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News