ಯುಪಿಎಸ್ಸಿಗಾಗಿ ಕಾರ್ಪೊರೇಟ್ ಉದ್ಯೋಗ ತೊರೆದಿದ್ದ ವಾರ್ದಾ ಖಾನ್‌ಗೆ 18ನೇ ರ‍್ಯಾಂಕ್‌

Update: 2024-04-17 10:13 GMT

ವಾರ್ದಾ ಖಾನ್ (Screengrab:X/@ANI)

ನೊಯ್ಡಾ: 2023ರ ಪ್ರತಿಷ್ಠಿತ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ತಮ್ಮ ಕಾರ್ಪೊರೇಟ್ ಉದ್ಯೋಗವನ್ನು ತೊರೆದಿದ್ದ ನೊಯ್ಡಾ ನಿವಾಸಿ ವಾರ್ದಾ ಖಾನ್, ಮಂಗಳವಾರ ಪ್ರಕಟವಾಗಿರುವ ಫಲಿತಾಂಶದಲ್ಲಿ 18ನೇ ರ‍್ಯಾಂಕ್‌ ಪಡೆದಿದ್ದಾರೆ.

ಜಾಗತಿಕ ವೇದಿಕೆಗಳಲ್ಲಿ ದೇಶವು ಹೆಮ್ಮೆ ಪಡುವಂತೆ ಮಾಡುವುದು ನನ್ನ ಮೊದಲ ಆದ್ಯತೆ ಹಾಗೂ ಬಯಕೆ ಆಗಿರುವುದರಿಂದ ಭಾರತೀಯ ವಿದೇಶಾಂಗ ಸೇವೆ(IFS)ಯನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು 24 ವರ್ಷದ ವಾರ್ದಾ ಖಾನ್ ಹೇಳಿದ್ದಾರೆ.

ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ವಾರ್ದಾ ಖಾನ್, “ಎಲ್ಲ ಆಕಾಂಕ್ಷಿಗಳಂತೆಯೆ ನಾವು ನಮ್ಮ ಪಯಣವನ್ನು ಆರಂಭಿಸಿದಾಗ, ನಮ್ಮ ಹೆಸರು ಫಲಿತಾಂಶ ಪಟ್ಟಿಯಲ್ಲಿರಬೇಕು ಎಂಬ ಕನಸು ಕಾಣುತ್ತೇವೆ. ಆದರೆ, ಮೊದಲ 20ರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಊಹಿಸಲಿಕ್ಕೂ ಅಸಾಧ್ಯ. ನಾನು ಮೊದಲ 20ರಲ್ಲಿ ಸ್ಥಾನ ಪಡೆಯಲಿದ್ದೇನೆ ಎಂದು ಊಹಿಸಿರಲಿಲ್ಲ. ನನ್ನ ಕುಟುಂಬದ ಎಲ್ಲ ಸದಸ್ಯರೂ ತುಂಬಾ ಸಂತಸಗೊಂಡಿದ್ದು, ಹೆಮ್ಮೆಯಿಂದ ಬೀಗುತ್ತಿದ್ದಾರೆ” ಎಂದು ಸಂತಸ ಹಂಚಿಕೊಂಡಿದ್ದಾರೆ.

“ನಾನು ನನ್ನ ಪ್ರಥಮ ಆಯ್ಕೆಯನ್ನಾಗಿ ಭಾರತೀಯ ವಿದೇಶಾಂಗ ಸೇವೆ(IFS)ಯನ್ನು ಆಯ್ದುಕೊಂಡಿದ್ದೇನೆ. ಇದರಿಂದ ಭಾರತದ ವರ್ಚಸ್ಸನ್ನು ಜಾಗತಿಕ ವೇದಿಕೆಗಳು ಹಾಗೂ ಬಹುಪಕ್ಷೀಯ ಸಂಸ್ಥೆಗಳಲ್ಲಿ ಮತ್ತಷ್ಟು ವಿಸ್ತರಿಸಲು ಹಾಗೂ ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವಾಗಲು ಬಯಸುತ್ತೇನೆ” ಎಂದೂ ಹೇಳಿದ್ದಾರೆ.

ನೊಯ್ಡಾದ ಸೆಕ್ಟರ್ 82ರಲ್ಲಿನ ವಿವೇಕ್ ವಿಹಾರ್ ನಿವಾಸಿಯಾದ ವಾರ್ದಾ ಖಾನ್, ದಿಲ್ಲಿ ವಿಶ್ವವಿದ್ಯಾಲಯದ ಖಾಲ್ಸಾ ಕಾಲೇಜಿನಿಂದ ಬಿಕಾಂ (ಆನರ್ಸ್) ಪದವೀಧರೆಯಾಗಿದ್ದಾರೆ. ತಮ್ಮ ಪೋಷಕರಿಗೆ ಒಬ್ಬಳೇ ಪುತ್ರಿಯಾಗಿರುವ ಅವರು, ತಮ್ಮ ಪೋಷಕರೊಂದಿಗೇ ವಾಸಿಸುತ್ತಿದ್ದಾರೆ. ಅವರ ತಂದೆ ಒಂಬತ್ತು ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು.

ನಿಮಗೆ ಹೇಗೆ ಯುಪಿಎಸ್ಸಿ ಪರೀಕ್ಷೆ ಬಗ್ಗೆ ಆಸಕ್ತಿ ಹುಟ್ಟಿತು ಎಂಬ ಪ್ರಶ್ನೆ ಗೆ ಉತ್ತರಿಸಿರುವ ವಾರ್ದಾ ಖಾನ್, ನನ್ನ ಕಾಲೇಜಿನ ದಿನಗಳಲ್ಲಿ ನಾನು ಯಾವಾಗಲೂ ಇತಿಹಾಸ ಹಾಗೂ ರಾಜಕೀಯದಂಥ ವಿಷಯಗಳಲ್ಲಿನ ಭೌಗೋಳಿಕ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದೆ ಎಂದು ಹೇಳಿದ್ದಾರೆ.

ಕಾಲೇಜಿನ ದಿನಗಳಲ್ಲಿ ಚರ್ಚಾಸ್ಪರ್ಧೆಗಳು ಹಾಗೂ ವಿಶ್ವಸಂಸ್ಥೆ ಅಣಕು ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದ ವಾರ್ದಾ ಖಾನ್, ಆ ದಿನಗಳಲ್ಲೂ ನಾಗರಿಕ ಸೇವೆಗಳನ್ನು ತೆಗೆದುಕೊಳ್ಳುವ ಬಗ್ಗೆ ಯಾವುದೇ ಯೋಜನೆ ಹೊಂದಿರಲಿಲ್ಲ ಎನ್ನಲಾಗಿದೆ.

ಆದರೆ, ತಾವು ಉದ್ಯೋಗಸ್ಥೆಯಾಗಿದ್ದಾಗ ತಾನು ನಾಗರಿಕ ಸೇವಕಿಯಾಗಬೇಕು ಎಂಬ ಬಯಕೆ ವಾರ್ದಾ ಖಾನ್ ರಲ್ಲಿ ಮೂಡಿದೆ.

“ನಾನು ಎಂಟು ತಿಂಗಳ ಕಾಲ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡಿದೆ. ಆದರೆ, ಅದರಿಂದ ನನಗೆ ಸಂತೃಪ್ತ ಭಾವನೆ ಮೂಡಲಿಲ್ಲ. ನನಗೆ ಸಮಾಜಕ್ಕೆ ಮರಳಿ ನೀಡುವುದು ಬೇಕಾಗಿತ್ತು ಹಾಗೂ ಜನರ ಬದುಕನ್ನು ಬದಲಿಸಲು ದೇಶಕ್ಕಾಗಿ ದುಡಿಯುವುದು ಬೇಕಿತ್ತು” ಎಂದು ಅವರು ಹೇಳಿದ್ದಾರೆ.

“ನನ್ನ ಆಸಕ್ತಿಗಳೊಂದಿಗೆ ನಾಗರಿಕ ಸೇವೆಗಳ ಪಠ್ಯಕ್ರಮ ಹಾಗೂ ಅವಕಾಶಗಳು ಹೊಂದಿಕೆಯಾಗಿದ್ದರಿಂದ ನಾನು ಅದರಲ್ಲಿ ಮುಂದುವರಿಯಲು ನಿರ್ಧರಿಸಿ, ಎಂಟು ತಿಂಗಳೊಳಗೆ ನನ್ನ ಉದ್ಯೋಗವನ್ನು ತೊರೆದೆ” ಎಂದೂ ವಾರ್ದಾ ಖಾನ್ ಹೇಳಿದ್ದಾರೆ.

ಯುಪಿಎಸ್ಸಿದ ಪರೀಕ್ಷೆಯಲ್ಲಿ 664 ಪುರುಷರು ಹಾಗೂ 352 ಮಹಿಳೆಯರು ಸೇರಿದಂತೆ ಒಟ್ಟು 1,016 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ವಿವಿಧ ಸೇವೆಗಳ ನೇಮಕಾತಿಗೆ ಅವರನ್ನೆಲ್ಲ ಕೇಂದ್ರ ಲೋಕ ಸೇವಾ ಆಯೋಗ ಶಿಫಾರಸು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News