ಜಮ್ಮು-ಕಾಶ್ಮೀರದ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ; ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

Update: 2024-02-06 15:49 GMT

ನಿತ್ಯಾನಂದ ರಾಯ್ | Photo: PTI 

ಹೊಸದಿಲ್ಲಿ : ಜಮ್ಮು ಹಾಗೂ ಕಾಶ್ಮೀರದ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮೀಸಲಾತಿ ಒದಗಿಸುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ 2019ರಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪ್ರಮುಖ ಬದಲಾವಣೆಗಳು ಸಂಭವಿಸಿವೆ ಎಂದು ಸರಕಾರ ಪ್ರತಿಪಾದಿಸಿದೆ.

ಜಮ್ಮು ಹಾಗೂ ಕಾಶ್ಮೀರ ಸ್ಥಳೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ-2024ರ ಕುರಿತು ಸಂಕ್ಷಿಪ್ತ ಚರ್ಚೆಯ ಸಂದರ್ಭ ಪ್ರತಿಕ್ರಿಯೆ ನೀಡಿದ ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜಾರಿಗೆ ತಂದ ಅಭಿವೃದ್ಧಿಯ ಫಲವನ್ನು ಜಮ್ಮು ಹಾಗೂ ಕಾಶ್ಮೀರದ ಜನತೆ ಅನುಭವಿಸಲು ಪ್ರಾರಂಭಿಸಿದ್ದಾರೆ ಎಂದಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ಪಂಚಾಯತ್ ಹಾಗೂ ನಗರಾಡಳಿತದಲ್ಲಿ ಪ್ರಸಕ್ತ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಯಮ ಇಲ್ಲ.

ಈ ಮಸೂದೆ ಜಮ್ಮು ಹಾಗೂ ಕಾಶ್ಮೀರದ ಪಂಚಾಯತ್ ಹಾಗೂ ನಗರಾಡಳಿತದಲ್ಲಿ ಇತರ ಹಿಂದುಳಿದ ವರ್ಗದವರಿಗೆ ಮೀಸಲಾತಿ ಒದಗಿಸುವಂತೆ ಕೋರಿದೆ. ಅಲ್ಲದೆ, ಸಂವಿಧಾನದ ನಿಬಂಧನೆಗಳೊಂದಿಗೆ ಜಮ್ಮು ಹಾಗೂ ಕಾಶ್ಮೀರದ ಸ್ಥಳೀಯ ಸಂಸ್ಥೆಗಳ ಕಾನೂನಿನಲ್ಲಿ ಸ್ಥಿರತೆ ತರಲಿದೆ.

ಇದರೊಂದಿಗೆ ಸ್ವಾತಂತ್ರ್ಯ ದೊರಕಿದ 75 ವರ್ಷಗಳ ಬಳಿಕ ಮೊದಲ ಬಾರಿಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಇತರ ಹಿಂದುಳಿದ ವರ್ಗಗಳ ನಾಗರಿಕರಿಗೆ ನ್ಯಾಯದ ಖಾತರಿ ನೀಡಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News