OLAದ ಭವಿಶ್ ಅಗರ್ವಾಲ್ – ಕಾಮೆಡಿಯನ್ ಕುನಾಲ್ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧ | 9% ಕುಸಿದ OLA ಷೇರು!
ಮುಂಬೈ : OLAದ ಭವಿಶ್ ಅಗರ್ವಾಲ್ – ಕಾಮೆಡಿಯನ್ ಕುನಾಲ್ ಕಾಮ್ರಾ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧ ನಡೆದ ಮರುದಿನ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(BSE) ನಲ್ಲಿ ಸೋಮವಾರ OLA ಎಲೆಕ್ಟ್ರಿಕ್ ಷೇರುಗಳು ಮೌಲ್ಯ ಶೇ. 9ರಷ್ಟು ಕುಸಿಯಿತು.
ಇಂಟ್ರಾಡೇ ನಲ್ಲಿ OLA ಎಲೆಕ್ಟ್ರಿಕ್ ಷೇರುಗಳು ಸೋಮವಾರ 99 ರೂ.ವಿಗೆ ಪ್ರಾರಂಭಗೊಂಡು 90.82 ರೂ.ವಿಗೆ ದಿನದ ಅಂತ್ಯದ ವಹಿವಾಟು ನಡೆಸಿತು. ಆ ಮೂಲಕ ತನ್ನ ಮೌಲ್ಯದಲ್ಲಿ 9 ರೂ. ಕುಸಿತ ಕಂಡಿತು.
ಇದು OLA ಸ್ಟಾಕ್ ಗೆ ಸತತ ಮೂರನೇ ದಿನದ ನಷ್ಟವಾಗಿದೆ. ಕಳೆದ ಆರು ವಹಿವಾಟು ಅವಧಿಗಳಲ್ಲಿ OLA ಷೇರುಗಳ ಐದರಲ್ಲಿ ಕುಸಿತ ಕಂಡವು. ಈ ವರ್ಷದ ಆಗಸ್ಟ್‌ನಲ್ಲಿ OLA ಷೇರು 76 ರೂ. ವಿಗೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿತ್ತು. IPO ಪ್ರಾರಂಭವಾದ ಬಳಿಕ ಅದರ ಬೆಲೆ ಒಮ್ಮೆಲೇ 157.4 ರೂ.ವಿಗೆ ತಲುಪಿತ್ತು. ಆ ಮೂಲಕ ಹೂಡಿಕೆದಾರರ ಹಣ ದ್ವಿಗುಣಗೊಂಡಿತ್ತು.
ಬಜಾಜ್ ಅಟೋ, ಟಿವಿಎಸ್ ಗಳೂ ಇವಿ ಮಾರುಕಟ್ಟೆಗೆ ಪ್ರವೇಶ ಪಡೆದ ಬಳಿಕ OLA ಎಲೆಕ್ಟ್ರಿಕ್ ಹೊಡೆತ ಅನುಭವಿಸಿದೆ. ಪ್ರಸಕ್ತ ಈ ಎರಡೂ ಕಂಪೆನಿಗಳ ಮಾರುಕಟ್ಟೆಯಲ್ಲಿ ಶೇ. 20ರ ಪಾಲು ಹೊಂದಿದೆ.
ಅಲ್ಲದೇ OLA ಎಲೆಕ್ಟ್ರಿಕ್ ಇತ್ತೀಚೆಗೆ 40,000 ರೂ. ರವರೆಗಿನ ಹಬ್ಬದ ರಿಯಾಯಿತಿಗಳೊಂದಿಗೆ ತನ್ನ BOSS ಸೀರೀಸ್ ಮಾರಾಟವನ್ನು ಪ್ರಾರಂಭಿಸಿದೆ. ಅಲ್ಲದೇ 49,999 ರಿಂದ ಪ್ರಾರಂಭವಾಗುವ S1 X ಸ್ಕೂಟರ್ ಶ್ರೇಣಿಯನ್ನು ಪ್ರಾರಂಭಿಸಿದೆ.