ಸ್ಪೀಕರ್ ಆಗಿ ಆಯ್ಕೆಯಾದ ಬೆನ್ನಿಗೇ 1975ರಲ್ಲಿ ತುರ್ತುಪರಿಸ್ಥಿತಿ ಹೇರಿಕೆ ವಿರುದ್ಧ ನಿರ್ಣಯ ಮಂಡಿಸಿದ ಓಂ ಬಿರ್ಲಾ
ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಆಗಿ ಇಂದು ಆಯ್ಕೆಗೊಂಡ ನಂತರ ಸ್ಪೀಕರ್ ಓಂ ಬಿರ್ಲಾ ಅವರು 1975 ರಲ್ಲಿ ಹೇರಲಾದ ತುರ್ತುಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವನ್ನು ಓದಿದರು. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಹೇರಲಾಗಿದ್ದ ತುರ್ತುಪರಿಸ್ಥಿತಿಯು ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಅವರು ನಿರ್ಣಯದಲ್ಲಿ ಓದಿದಾಗ ಸದನದಲ್ಲಿದ್ದ ವಿಪಕ್ಷ ಸಂಸದರು ತೀವ್ರವಾಗಿ ಆಕ್ಷೇಪಿಸಿದರು.
“1975ರಲ್ಲಿ ತುರ್ತುಪರಿಸ್ಥಿತಿ ಹೇರಿದ್ದನ್ನು ಈ ಸದನ ಖಂಡಿಸುತ್ತದೆ. ಇದನ್ನು ವಿರೋಧಿಸಿದ್ದ ಹಾಗೂ ದೇಶದ ಪ್ರಜಾಪ್ರಭುತ್ವದ ರಕ್ಷಣೆಯ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದ ಎಲ್ಲಾ ಜನರನ್ನೂ ನಾವು ಶ್ಲಾಘಿಸುತ್ತೇವೆ,” ಎಂದು ಸ್ಪೀಕರ್ ಹೇಳಿದಾಗ ವಿಪಕ್ಷಗಳು ಆಕ್ಷೇಪಿಸಿ ಪ್ರತಿಭಟಿಸಿವೆ.
ವಿಪಕ್ಷ ಸಂಸದರು ಎದ್ದು ನಿಂತು ಸಂಸತ್ತಿನಲ್ಲಿ ತುರ್ತುಪರಿಸ್ಥಿತಿ ಹೇರಿಕೆಯ ಉಲ್ಲೇಖವನ್ನು ವಿರೋಧಿಸಿದರು.
“ಜೂನ್ 25, 1976 ದೇಶದ ಇತಿಹಾಸದ ಕರಾಳ ಅಧ್ಯಾಯ ಎಂದು ಸದಾ ತಿಳಿಯಲ್ಪಡುವುದು. ಈ ದಿನ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ ಬಾಬಾ ಸಾಹೇಬ್ ಅವರಿಂದ ರಚಿತ ಸಂವಿಧಾನದ ಮೇಲೆ ದಾಳಿ ನಡೆಸಿದರು,” ಎಂದು ಓಂ ಬಿರ್ಲಾ ಹೇಳಿದರು.