ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ | ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಉಮರ್ ಅಬ್ದುಲ್ಲಾ

Update: 2024-08-19 12:46 GMT

Photo Credit: PTI 

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಪ್ರಣಾಳಿಕೆಯನ್ನು ಪಕ್ಷದ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಸೋಮವಾರ ಬಿಡುಗಡೆ ಮಾಡಿದರು.

ಪಕ್ಷದ ಪ್ರಣಾಳಿಕೆ ಸಮಿತಿಯ ಸದಸ್ಯರು ಸೇರಿದಂತೆ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮರ್ ಅಬ್ದುಲ್ಲಾ, "ಇದು ಕೇವಲ ಚುನಾವಣಾ ಪ್ರಣಾಳಿಕೆಯಲ್ಲ. ಇದು ಸಂಪೂರ್ಣವಾಗಿ ಮುಂದಿನ ಐದು ವರ್ಷದ ಆಡಳಿತದ ಮಾರ್ಗಸೂಚಿ. ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದೆಲ್ಲವನ್ನು ಅನುಷ್ಠಾನ ಮಾಡಲಾಗುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಬದಲಾವಣೆಯನ್ನು ತರುತ್ತೇವೆ ಎಂದು ಅನೇಕರು ಈ ಹಿಂದೆ ಮಾತನಾಡಿದ್ದರು. ಆದರೆ ಅದೆಲ್ಲವೂ ಮೋಸ ಎಂದು ಬಳಿಕ ಅರಿವಾಯಿತು” ಎಂದು ಹೇಳಿದ್ದಾರೆ.

ಪ್ರಣಾಳಿಕೆ ಸಮಿತ ಸದಸ್ಯ ಶ್ರೀನಗರ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಮಾತನಾಡಿ, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜಕೀಯ ಮತ್ತು ಸಾಂವಿಧಾನಿಕ ಸ್ಥಾನಮಾನ ಈ ಹೊತ್ತಿನ ಅಗತ್ಯತೆ. ಜನರಿಂದ ಕಿತ್ತುಕೊಂಡ ಹಕ್ಕುಗಳನ್ನು ಮರುಸ್ಥಾಪಿಸುವ ಸವಾಲು ಪಕ್ಷದ ಮುಂದಿದೆ. ಅಲ್ಲದೇ, ಪಕ್ಷವು ಪ್ರಣಾಳಿಕೆಗಾಗಿ ಜನರಿಂದ ಸಲಹೆಗಳನ್ನು ಕೇಳಿದೆ. ಅವರ ಸಲಹೆಗಳನ್ನು ಚರ್ಚಿಸಿ ಅಂತಿಮ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.

90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತದ ಚುನಾವಣೆ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಅಂತಿಮ ಪ್ರಕಟವಾಗಲಿದೆ.

ನ್ಯಾಷನಲ್ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ನಾಯಕ ಅಬ್ದುಲ್ ರಹೀಮ್ ರಾಥರ್ ನೇತೃತ್ವದಲ್ಲಿ ಪ್ರಣಾಳಿಕೆಯನ್ನು ರಚಿಸಲು ಸಮಿತಿಯನ್ನು ರಚಿಸಿತ್ತು. ಪಕ್ಷದ ಶ್ರೀನಗರ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಸೇರಿದಂತೆ ಇತರ ಹಿರಿಯ ನಾಯಕರು ಸಮಿತಿಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News