ಮುಂಬೈ: ಧುಮ್ಮಿಕ್ಕುತ್ತಿರುವ ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ಐವರು; ಇತರ ಇಬ್ಬರು ಸುರಕ್ಷಿತ

Update: 2024-07-01 05:17 GMT

Screengrab:X/NDTV

ಮುಂಬೈ: ಮುಂಬೈ ಸಮೀಪದ ಜನಪ್ರಿಯ ಪ್ರವಾಸಿ ತಾಣ ಲೋನಾವಾಲದಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತದಲ್ಲಿ ಎಲ್ಲರೂ ನೋಡನೋಡುತ್ತಿದ್ದಂತೆಯೇ ಒಂದೇ ಕುಟುಂಬದ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ ಐದು ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಈ ಘಟನೆ ರವಿವಾರ ಅಪರಾಹ್ನ 1.30 ರ ಸುಮಾರಿಗೆ ನಡೆದಿದ್ದು ಈ ಮನಕಲಕುವ ಘಟನೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಒಟ್ಟು ಏಳು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದರೂ ಅವರಲ್ಲಿ ಇಬ್ಬರು ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ನೂರಾರು ಪ್ರವಾಸಿಗರು ಈ ದುರಂತಕ್ಕೆ ಸಾಕ್ಷಿಯಾಗಿದ್ದರೂ ಧುಮ್ಮಿಕ್ಕುತ್ತಿರುವ ಜಲಧಾರೆಯ ನಡುವೆ ಅವರೆಲ್ಲರೂ ನಿಸ್ಸಹಾಯಕರಾಗಿದ್ದರು.

ಇಲ್ಲಿಯ ತನಕ ಎರಡು ಮೃತದೇಹಗಳು ದೊರಕಿದ್ದು, ಶೋಧ ಕಾರ್ಯಾಚರಣೆ ನಡೆದಿದೆ. ಎಲ್ಲಾ ಮೃತರೂ ಪುಣೆ ಸಯ್ಯದ್‌ ನಗರದವರಾಗಿದ್ದು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಭುಸಿ ಅಣೆಕಟ್ಟಿನ ಹಿನ್ನೀರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು ಭಾರೀ ಮಳೆಯಿಂದಾಗಿ ಅಣೆಕಟ್ಟು ಉಕ್ಕಿ ಹರಿದಿದ್ದರಿಂದ ಜಲಪಾತದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಈ ದುರಂತ ಸಂಭವಿಸಿದೆ.

ಮೃತರಲ್ಲಿ ಓರ್ವ 40 ವರ್ಷದ ಮಹಿಳೆ, 13 ವರ್ಷದ ಓರ್ವ ಬಾಲಕಿ, ಆರು ವರ್ಷದ ಇಬ್ಬರು ಬಾಲಕಿಯರು ಹಾಗೂ ನಾಲ್ಕು ವರ್ಷದ ಬಾಲಕ ಸೇರಿದ್ದಾನೆ.

ಈ ದುರ್ಘಟನೆಯು ಈ ಜನಪ್ರಿಯ ಪ್ರವಾಸಿ ತಾಣದಲ್ಲಿ ಸುರಕ್ಷತಾ ವಿಚಾರದ ಬಗ್ಗೆ ಕಳವಳಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News