ಗಣರಾಜ್ಯೋತ್ಸವ ದಿನಾಚರಣೆಯಂದು ದೇಶಾದ್ಯಂತ 500 ಜಿಲ್ಲೆಗಳಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲಿರುವ ರೈತ ಸಂಘಟನೆಗಳು
ಹೊಸದಿಲ್ಲಿ: ದೇಶಾದ್ಯಂತ 500 ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಂದು ಟ್ರ್ಯಾಕ್ಟರ್ ಪರೇಡ್ ನಡೆಸಲಾಗುವುದು ಎಂದು ಗುರುವಾರ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕೃತ ಗಣರಾಜ್ಯೋತ್ಸವ ಮುಕ್ತಾಯಗೊಂಡ ನಂತರ ಟ್ರ್ಯಾಕ್ಟರ್ ಪರೇಡ್ ಅನ್ನು ಹಮ್ಮಿಕೊಳ್ಳಲಾಗುವುದು ಎಂದು ಅದು ಹೇಳಿದೆ.
“ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನವರಿ 26, 2024ರಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಜಿಲ್ಲಾ ಮಟ್ಟದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲಿದೆ. ಈ ಪರೇಡ್ ಕನಿಷ್ಠ 500 ಜಿಲ್ಲೆಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಪರೇಡ್ ನಲ್ಲಿ ಭಾಗವಹಿಸಲಿರುವ ರೈತರು ತಮ್ಮ ತಮ್ಮ ಸಂಘಟನೆಗಳ ಧ್ವಜದೊಂದಿಗೆ ರಾಷ್ಟ್ರ ಧ್ವಜವನ್ನು ಎತ್ತರದಲ್ಲಿ ಹಾರಿಸಬೇಕು. ಪ್ರಜಾಪ್ರಭುತ್ವ, ಒಕ್ಕೂಟ, ಜಾತ್ಯತೀತತೆ ಹಾಗೂ ಸಮಾಜವಾದವನ್ನು ರಕ್ಷಿಸುವ ಪ್ರತಿಜ್ಞಾ ವಿಧಿಯನ್ನು ಭಾರತದ ಸಂವಿಧಾನದ ಹೆಸರಲ್ಲಿ ರೈತರು ತೆಗೆದುಕೊಳ್ಳಬೇಕು. ಟ್ರ್ಯಾಕ್ಟರ್ ಗಳಲ್ಲದೆ, ಇತರ ವಾಹನಗಳು ಹಾಗೂ ಬೈಕ್ ಗಳೂ ಪರೇಡ್ ನಲ್ಲಿ ಭಾಗವಹಿಸಲಿವೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಜನವರಿ 26, 2021ರಂದು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿ ರೈತರು ನಡೆಸಿದ್ದ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಪೊಲೀಸರು ಹಾಗೂ ರೈತರ ನಡುವೆ ಭಾರಿ ಸಂಘರ್ಷವಾಗಿತ್ತು.