ಚುನಾವಣಾ ಫಲಿತಾಂಶಕ್ಕೆ ಮುನ್ನ ರಾಷ್ಟ್ರಪತಿಗೆ ನಿವೃತ್ತ ನ್ಯಾಯಮೂರ್ತಿಗಳ ಬಹಿರಂಗ ಪತ್ರ
ಹೊಸದಿಲ್ಲಿ: ಈಗಾಗಲೇ ಜಾರಿಯಲ್ಲಿರುವ ಪ್ರಜಾಸತ್ತಾತ್ಮಕ ರೂಢಿಗಳಿಗೆ ಅನುಸಾರವಾಗಿ ಅತ್ಯಧಿಕ ಸ್ಥಾನ ಗಳಿಸಿದ, ಚುನಾವಣಾಪೂರ್ವದಲ್ಲೇ ರಚನೆಗೊಂಡಿರುವ ಅತಿದೊಡ್ಡ ಮೈತ್ರಿಕೂಟವನ್ನು ಸರ್ಕಾರ ರಚನೆಗೆ ಆಹ್ವಾನಿಸುವಂತೆ ಏಳು ಮಂದಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಒಂದು ವೇಳೆ 2024ರ ಚುನಾವಣೆಯಲ್ಲಿ ಅತಂತ್ರ ಸಂಸತ್ ನಿರ್ಮಾಣವಾದಲ್ಲಿ ಸಂಸದರ ಖರೀದಿ ಪ್ರಯತ್ನವನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಆಗ್ರಹಿಸಿದ್ದಾರೆ.
ಪ್ರಸಕ್ತ ಅಧಿಕಾರದಲ್ಲಿರುವ ಸರ್ಕಾರ ಜನಾದೇಶವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾದಲ್ಲಿ ಸುಲಲಿತವಾಗಿ ಅಧಿಕಾರ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನೂ ನಿವೃತ್ತ ನ್ಯಾಯಮೂರ್ತಿಗಳು ಒತ್ತಾಯಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ನ ಆರು ಮಂದಿ ನಿವೃತ್ತ ನ್ಯಾಯಮೂರ್ತಿಗಳಾದ ಜಿ.ಎಂ.ಅಕ್ಬರ್ ಅಲಿ, ಅರುಣಾ ಜಗದೀಶನ್, ಡಿ.ಹರಿಪರಂಧಾಮನ್, ಪಿ.ಆರ್.ಶಿವಕುಮಾರ್, ಸಿ.ಟಿ.ಸೆಲ್ವಂ, ಎಸ್.ವಿಮಲಾ ಮತ್ತು ಪಾಟ್ನಾ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಈ ಬಹಿರಂಗ ಪತ್ರಕ್ಕೆ ಸಹಿ ಮಾಡಿದ್ದಾರೆ.
ಪ್ರಸಕ್ತ ಆಡಳಿತಾರೂಢ ಜನಮತವನ್ನು ಕಳೆದುಕೊಂಡಲ್ಲಿ, ಅಧಿಕಾರದ ಸುಲಲಿತ ವರ್ಗಾವಣೆ ಬಗ್ಗೆ ನಮಗೆ ನೈಜ ಕಳಕಳಿ ಇದ್ದು, ಸಂವಿಧಾನಾತ್ಮಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಎಂದು ನಿವೃತ್ತ ನ್ಯಾಯಮೂರ್ತಿಗಳು ಎಚ್ಚರಿಸಿದ್ದಾರೆ.
ಮಾಜಿ ಉನ್ನತಾಧಿಕಾರಿಗಳು ಮತ್ತು ನ್ಯಾಯಮೂರ್ತಿಗಳ ಕಾನ್ ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ (ಸಿಸಿಜಿ) ಮೇ 25ರಂದು ಬಹುರಂಗ ಹೇಳಿಕೆ ನೀಡಿ, "ಒಂದು ವೇಳೆ ಅತಂತ್ರ ಸಂಸತ್ ನಿರ್ಮಾಣವಾದಲ್ಲಿ ಭಾರತದ ರಾಷ್ಟ್ರಪತಿಯವರ ಮೇಲೆ ದೊಡ್ಡ ಹೊಣೆ ಹೊರಿಸಬೇಕಾಗುತ್ತದೆ" ಎಂಬ ಹೇಳಿಕೆಯನ್ನು ಒಪ್ಪುವುದು ಕಷ್ಟ ಎಂದು ಸ್ಪಷ್ಟಪಡಿಸಿದ್ದರು.
"ರಾಷ್ಟ್ರಪತಿ ರೂಢಿಯಲ್ಲಿರುವ ಪ್ರಜಾಸತ್ತಾತ್ಮಕ ಸಂಪ್ರದಾಯದಂತೆ ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡ ಅತಿದೊಡ್ಡ ಮೈತ್ರಿಕೂಟಕ್ಕೆ ಮೊದಲು ಆಹ್ವಾನ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಜತೆಗೆ ಸಂಸದರ ಖರೀದಿಯ ಸಾಧ್ಯತೆಗಳಿಗೆ ಅವಕಾಶ ನೀಡಲಾರರು" ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸುಲಲಿತ ಅಧಿಕಾರ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಸಿಜೆಐ ಮತ್ತು ಸಿಇಸಿ ಅವರನ್ನು ಒತ್ತಾಯಿಸಲಾಗಿದೆ.