ಕೆನಡಾದಲ್ಲಿ ಹಿಂದೂಗಳಿಗೆ ಖಾಲಿಸ್ತಾನಿಗಳಿಂದ ಬಹಿರಂಗ ಬೆದರಿಕೆ: ಆರೋಪ
ಹೊಸದಿಲ್ಲಿ: ಕೆನಡಾದಲ್ಲಿ ಖಾಲಿಸ್ತಾನಿ ಪರ ಸಂಘಟನೆಗಳು, ಅಲ್ಪಸಂಖ್ಯಾತ ಹಿಂದೂಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದು, ದೇವಾಲಯಗಳನ್ನು ವಿರೂಪಗೊಳಿಸಿದ ಹಲವು ನಿದರ್ಶನಗಳು ವರದಿಯಾಗಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
"ಕೆನಡಾದಲ್ಲಿರುವ ಭಾರತೀಯ ಮಿಷನ್ ನ ಭದ್ರತಾ ಸಿಬ್ಬಂದಿಗೆ ಮತ್ತು ರಾಜತಾಂತ್ರಿಕ ಅಧಿಕಾರಿಗಳಿಗೆ ಖಾಲಿಸ್ತಾನಿಗಳು ಬಹಿರಂಗವಾಗಿ ಬೆದರಿಕೆ ಹಾಕಿರುವುದು ತೀರಾ ಗಂಭೀರ ಬೆಳವಣಿಗೆ ಹಾಗೂ ವಿಯೆನ್ನಾ ಸಮ್ಮೇಳನದಲ್ಲಿ ಕೆನಡಾ ಒಪ್ಪಿಕೊಂಡಿರುವ ಹೊಣೆಗಾರಿಕೆಗೆ ಸವಾಲು" ಎಂದು ಪರಿಸ್ಥಿತಿಯ ಬಗ್ಗೆ ನಿಗಾ ಇಟ್ಟಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಹುಶಃ ಮಾನವ ಹಕ್ಕುಗಳನ್ನು ಅಳೆಯಲು ಭಿನ್ನ ಮಾನದಂಡಗಳು ಇದ್ದಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
"ಪಂಜಾಬ್ ನ ಕ್ಷುಲ್ಲಕ ವಿಷಯಗಳಿಗೂ ಕೆನಡಾ ಪ್ರಬಲವಾಗಿ ಧ್ವನಿ ಎತ್ತುತ್ತಿದೆ. ಆದರೆ ಈ ಬಗೆಯ ಬೆದರಿಕೆ, ಹಿಂಸೆ, ಮಾದಕ ವಸ್ತು ಕಳ್ಳಸಾಗಾಣಿಕೆ ಮತ್ತು ಕೆನಡಾದಲ್ಲಿ ಪಿಕೆಇಗಳ ಸುಲಿಗೆ ಹೀಗೆ ಉಭಯ ದೇಶಗಳಿಗೆ ಧಕ್ಕೆಯಾಗುವ ಕೃತ್ಯಗಳ ಬಗ್ಗೆ ಮೌನ ವಹಿಸಿದೆ" ಎಂದು ಅವರು ವಿವರಿಸಿದ್ದಾರೆ.
ಈ ಎಲ್ಲ ವಿಚಾರಗಳನ್ನು ಉಭಯ ದೇಶಗಳ ಗುಪ್ತಚರ ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿಷಯದ ಬಗ್ಗೆ ಅರಿವು ಇರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.