ನಾಳೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ | ಶೂಟರ್ ಮನು ಭಾಕರ್, ಹಾಕಿ ಗೋಲ್‌ಕೀಪರ್ ಶ್ರೀಜೇಶ್ ಭಾರತದ ಧ್ವಜಧಾರಿಗಳು
ಪ್ಯಾರಿಸ್ : ಎರಡು ವಾರಗಳಿಗಿಂತ ಹೆಚ್ಚು ಸಮಯ ನಡೆದ 33ನೇ ಆವೃತ್ತಿಯ ವಿಶ್ವದ ಅತಿದೊಡ್ಡ ಬಹು ಕ್ರೀಡಾ ಸ್ಪರ್ಧೆ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ಗೆ ರವಿವಾರ ತೆರೆ ಬೀಳಲಿದೆ. ಆಕರ್ಷಕ ಸಮಾರೋಪ ಸಮಾರಂಭವು ಒಲಿಂಪಿಕ್ಸ್‌ನ ಪ್ರಮುಖ ಕ್ರೀಡಾಂಗಣ, ಸಾಂಪ್ರದಾಯಿಕ ತಾಣ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆಯಲಿದೆ.
ಸಮಾರೋಪ ಕಾರ್ಯಕ್ರಮದಲ್ಲಿ ಯಾರೆಲ್ಲ ಪ್ರದರ್ಶನ ನೀಡಲಿದ್ದಾರೆಂಬ ಕುರಿತು ಸಂಘಟಕರು ಈ ತನಕ ಬಹಿರಂಗಪಡಿಸಿಲ್ಲ. ಬಾಲಿವುಡ್ ಚಿತ್ರತಾರೆ ಟಾಮ್ ಕ್ರೂಸ್ ಕಾರ್ಯಕ್ರಮಕ್ಕೆ ರಂಗೇರಿಸಲಿದ್ದಾರೆ ಎಂದು ವರದಿಯಾಗಿದೆ.
ಸಮಾರೋಪ ಸಮಾರಂಭದಲ್ಲಿ ಅತ್ಯಂತ ಸಾಂಪ್ರದಾಯಿಕ ಅಂಶಗಳಾದ ಕ್ರೀಡಾಪಟುಗಳ ಪರೇಡ್, 45,0000 ಸ್ವಯಂ ಸೇವಕರಿಗೆ ಧನ್ಯವಾದಗಳು, ಮಹಿಳೆಯರ ಮ್ಯಾರಥಾನ್ ವಿಜೇತರಿಗೆ ಪದಕ ಪ್ರದಾನ, ಒಲಿಂಪಿಕ್ಸ್ ಜ್ವಾಲೆಯನ್ನು ನಂದಿಸುವುದು ನಡೆಯಲಿದೆ. ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಅವರು ಒಲಿಂಪಿಕ್ಸ್ ಕ್ರೀಡಾಕೂಟದ ಅಂತ್ಯವಾಗಿದೆ ಎಂದು ಘೋಷಣೆ ಮಾಡಲಿದ್ದಾರೆ.
ಪುರುಷರ ಹಾಗೂ ಮಹಿಳೆಯರ ಓಟ(100 ಮೀ. ಹಾಗೂ 200 ಮೀ.)ಹಾಗೂ ಸ್ವಿಮ್ಮಿಂಗ್ ಸ್ಪರ್ಧಾವಳಿಗಳು ಸಹಿತ ಬಹುತೇಕ ಪ್ರಮುಖ ಸ್ಪರ್ಧೆಗಳು ಮುಕ್ತಾಯವಾಗಿದ್ದು ಅತ್ಲೆಟಿಕ್ಸ್, ಬಾಕ್ಸಿಂಗ್, ಬೀಚ್ ವಾಲಿವಾಲ್ ಹಾಗೂ ಫುಟ್ಬಾಲ್ ಸಹಿತ ಇತರ ಕ್ರೀಡೆಗಳ ಪದಕ ವಿತರಣೆ ಶನಿವಾರ ಹಾಗೂ ರವಿವಾರ ನಡೆಯಲಿವೆ.
ಕುಸ್ತಿಪಟು ರಿತಿಕಾ ಹೂಡಾ ಶನಿವಾರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಾಕಣಕ್ಕೆ ಇಳಿದ ಭಾರತದ ಕೊನೆಯ ಅಥ್ಲೀಟ್ ಆಗಿದ್ದಾರೆ. ತನ್ನ ಚೊಚ್ಚಲ ಒಲಿಂಪಿಕ್ಸ್ ಅನ್ನು ಆಡಿದ ಅವರು ಮಹಿಳೆಯರ 76ಕೆಜಿ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ. ಒಂದು ವೇಳೆ ರಿಪಿಚೇಜ್ ಸುತ್ತಿಗೆ ಅರ್ಹತೆ ಪಡೆದರೆ ರವಿವಾರ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ. ಅಮನ್ ಸೆಹ್ರಾವತ್ ಶುಕ್ರವಾರ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು.
ಸಮಾರೋಪ ಸಮಾರಂಭದಲ್ಲಿ ಶೂಟರ್ ಮನು ಭಾಕರ್ ಹಾಗೂ ಹಾಕಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಭಾರತದ ಧ್ವಜಧಾರಿಗಳಾಗಿದ್ದಾರೆ. ಮನು ಮೂರು ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಿ ಗೇಮ್ಸ್‌ನಲ್ಲಿ ಮಿಂಚಿದ್ದಾರೆ. ಭಾರತದ ಪುರುಷರ ಹಾಕಿ ತಂಡವು ಸತತ ಎರಡನೇ ಒಲಿಂಪಿಕ್ಸ್ ಪದಕ ಗೆಲ್ಲಲು ನೆರವಾಗುವ ಮೂಲಕ ಶ್ರೀಜೇಶ್ ತನ್ನ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಒಲಿಂಪಿಕ್ಸ್ ಜ್ಯೋತಿಯನ್ನು ಪ್ಯಾರಿಸ್‌ನಿಂದ ಲಾಸ್ ಏಂಜಲೀಸ್‌ಗೆ ಅಧಿಕೃತವಾಗಿ ಹಸ್ತಾಂತರಿಸಲಾಗುತ್ತದೆ. ಲಾಸ್ ಏಂಜಲೀಸ್ 2028ರಲ್ಲಿ ಮೂರನೇ ಬಾರಿ ಒಲಿಂಪಿಕ್ಸ್ ಆತಿಥ್ಯವಹಿಸಲಿದೆ. ಈ ಕಾರ್ಯಕ್ರಮದಲ್ಲಿ ಹಾಲಿವುಡ್ ಐಕಾನ್ ಟಾಮ್ ಕ್ರೂಸ್ ಸಾಹಸ ಪ್ರದರ್ಶನ ನೀಡಲಿದ್ದಾರೆಂದು ವರದಿಯಾಗಿದೆ.
ಪ್ಯಾರಿಸ್ ಗೇಮ್ಸ್‌ನ ಕೊನೆಯ ದಿನವಾದ ರವಿವಾರ ಮಹಿಳೆಯರ ಮ್ಯಾರಥಾನ್, ಪುರುಷರ ಹ್ಯಾಂಡ್‌ಬಾಲ್, ಮಹಿಳೆಯರ ಬಾಸ್ಕೆಟ್‌ಬಾಲ್, ಮಹಿಳೆಯರ ವಾಲಿಬಾಲ್, ಮಹಿಳೆಯರ ಮೋಡರ್ನ್ ಪೆಂಟಾಥ್ಲಾನ್ ಹಾಗೂ ಪುರುಷರ ಹಾಗೂ ಮಹಿಳೆಯರ ವಿವಿಧ ಕುಸ್ತಿ ವಿಭಾಗಗಳಲ್ಲಿ ಪದಕಗಳ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಅತ್ಯಾಕರ್ಷಕ ಆರಂಭ ಹಾಗೂ ಮುಕ್ತಾಯವನ್ನು ಹೊಂದಿರುತ್ತದೆ. ಜುಲೈ 26ರಂದು ಸೀನ್ ನದಿಯಲ್ಲಿ ಬೋಟ್‌ಗಳ ಮೆರವಣಿಯನ್ನು ನಡೆಸುವ ಮೂಲಕ ವಿಶಿಷ್ಟವಾಗಿ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗಿತ್ತು.
ಪ್ರೇಕ್ಷಕರಿಗೆ ಸಮತೋಲಿತ ಅನುಭವವನ್ನು ನೀಡಲು ವಿಶಿಷ್ಟ ಆರಂಭ ಹಾಗೂ ಸಾಂಪ್ರದಾಯಿಕವಾಗಿ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ.
ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಸದ್ಯ ಚೀನಾವು ಅಗ್ರ ಸ್ಥಾನದಲ್ಲಿದೆ. ಚೀನಿಯರು 36 ಚಿನ್ನ, 27 ಬೆಳ್ಳಿ ಹಾಗೂ 23 ಕಂಚು ಸಹಿತ ಒಟ್ಟು 86 ಪದಕಗಳನ್ನು ಜಯಿಸಿದ್ದಾರೆ. ಅಮೆರಿಕ(113 ಪದಕ), ಆಸ್ಟ್ರೇಲಿಯ(49 ಪದಕ) ಹಾಗೂ ಜಪಾನ್(38 ಪದಕ)ಕ್ರಮವಾಗಿ 2ನೇ, 3ನೇ ಹಾಗೂ 4ನೇ ಸ್ಥಾನದಲ್ಲಿವೆ. ಒಂದು ಬೆಳ್ಳಿ, 5 ಕಂಚು ಸಹಿತ ಒಟ್ಟು 6 ಪದಕಗಳನ್ನು ಗೆದ್ದಿರುವ ಭಾರತವು 69ನೇ ಸ್ಥಾನದಲ್ಲಿದೆ.