ಮದುವೆಗೆ ತಯಾರಿ: ನಗುಮುಖವನ್ನು ಸೃಷ್ಟಿಸುವ ದಂತ ಚಿಕಿತ್ಸೆ ಪ್ರಕ್ರಿಯೆ ವೇಳೆ ವರ ಮೃತ್ಯು!
ಹೈದರಬಾಬಾದ್: ವಿವಾಹದ ಸಂದರ್ಭದಲ್ಲಿ ನಗುಮುಖವನ್ನು ಸೃಷ್ಟಿಸುವ ದಂತ ಚಿಕಿತ್ಸೆ ಪ್ರಕ್ರಿಯೆ, 28 ವರ್ಷ ವಯಸ್ಸಿನ ಉದ್ಯಮಿಯೊಬ್ಬರಿಗೆ ಮಾರಕವಾಗಿ ಪರಿಣಮಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ವಾರ ಇಲ್ಲಿನ ಜ್ಯೂಬಿಲಿ ಹಿಲ್ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಸಂಬಂಧ ಇಎಂಎಫ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲಕ್ಷ್ಮೀನಾರಾಯಣ ವಿಂಜಂ ಅವರ ಕುಟುಂಬ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಫೆಬ್ರವರಿ 16ರಂದು ಕ್ಲಿನಿಕ್ ನಲ್ಲಿ ಈ ಪ್ರಕ್ರಿಯೆ ನಡೆಸುತ್ತಿದ್ದ ವೇಳೆ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿದ್ದರಿಂದ ಮಗ ಪ್ರಜ್ಞೆ ಕಳೆದುಕೊಂಡಿದ್ದ. ಅಧಿಕ ಔಷಧಿ ಡೋಸೇಜ್ ನಿಂದ ಆತ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಲಕ್ಷ್ಮೀನಾರಾಯಣ ಅವರ ತಂದೆ ವಿಂಜ್ ರಾಮುಲು ದೂರಿದ್ದಾರೆ.
ಲಕ್ಷ್ಮೀನಾರಾಯಣ ಅವರು ನಗು ವಿನ್ಯಾಸ ಪ್ರಕ್ರಿಯೆಗಾಗಿ ಕ್ಲಿನಿಕ್ ಗೆ ತೆರಳಿದ್ದರು. ಅಂದು ಸಂಜೆ ರಾಮುಲು ಕರೆ ಮಾಡಿದಾಗ, ಈ ಪ್ರಕ್ರಿಯೆ ವೇಳೆ ಲಕ್ಷ್ಮೀನಾರಾಯಣ ಪ್ರಜ್ಞೆ ಕಳೆದುಕೊಂಡಿದ್ದಾಗಿ ಕ್ಲಿನಿಕ್ ಸಿಬ್ಬಂದಿ ಉತ್ತರಿಸಿದ್ದರು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದಾರಿ ಮಧ್ಯೆಯೇ ಅವರು ಮೃತಪಟ್ಟರು ಎಂದು ಸಿಬ್ಬಂದಿ ಹೇಳಿದ್ದಾರೆ.
ಹೈದರ್ ನಗರದ ಕುಕತಪಲ್ಲಿಯ ತಮ್ಮ ಮನೆಯಿಂದ ಹೋಗುವಾಗ ಮಗ ಆರೋಗ್ಯದಿಂದಿದ್ದ. ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ವೈದ್ಯರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ ಎಂದು ರಾಮುಲು ದೂರಿದ್ದಾರೆ.