ಉತ್ತರ ಪ್ರದೇಶ| ಕನ್ವರ್ ಯಾತ್ರಾ ಮಾರ್ಗದ ಹೋಟೆಲಿಗರಿಗೆ ಹೆಸರು ಪ್ರದರ್ಶಿಸುವಂತೆ ಸೂಚನೆ; ವ್ಯಾಪಕ ಆಕ್ರೋಶ
ಲಕ್ನೋ: ಕನ್ವರ್ ಯಾತ್ರಾ ಮಾರ್ಗದ ಉದ್ದಕ್ಕೂ ಇರುವ ಹೋಟೆಲ್‌ಗಳ ಮಾಲೀಕರಿಗೆ ಮತ್ತು ನಿರ್ವಾಹಕರಿಗೆ ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕು ಎಂಬ ಆದೇಶ ಹೊರಡಿಸಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್‌ಗಳು, ಧಾಬಾಗಳು ಮತ್ತು ಸಣ್ಣಪುಟ್ಟ ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಲು ಉತ್ತರ ಪ್ರದೇಶದ ಮುಜಫರ್‌ನಗರದ ಎಸ್‌ಪಿ ಅಭಿಷೇಕ್ ಸಿಂಗ್ ಆದೇಶಿಸಿದ್ದಾರೆ.
ಹೋಟೆಲ್‌ಗಳ ಮಾಲಕರಿಗೆ ಮತ್ತು ನಿರ್ವಾಹಕರಿಗೆ ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕು ಎಂಬ ಆದೇಶ ಹಿಂದೆ ಧಾರ್ಮಿಕ ಅಂತರ ನಿರ್ಮಿಸುವ ಉದ್ದೇಶವಿಲ್ಲ, ಬದಲು ಪವಿತ್ರ ಶ್ರಾವಣ ಮಾಸದಲ್ಲಿ ಕೆಲವೊಂದು ಆಹಾರ ಪದಾರ್ಥಗಳಿಂದ ದೂರವುಳಿಯುವ ಭಕ್ತಾದಿಗಳ ಹಿತದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎಂದು ಮುಝಫ್ಫರನಗರ ಪೊಲೀಸರು ಹೇಳಿಕೊಂಡಿದ್ದಾರೆ.
ಈ ಮಾರ್ಗದಲ್ಲಿ ಪ್ರಯಾಣಿಸುವ ಭಕ್ತರಲ್ಲಿ ಗೊಂದಲವನ್ನು ದೂರಗೊಳಿಸುವ ಉದ್ದೇಶವನ್ನು ಈ ನಿರ್ಧಾರ ಹೊಂದಿದೆ ಎಂದು ಮುಝಫ್ಫರನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಈ ಕ್ರಮದ ವಿರುದ್ಧ ಕೇಳಿ ಬಂದ ಟೀಕೆಗಳ ಹಿನ್ನೆಲೆಯಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಮುಝಫ್ಫರನಗರದ ಆಶ್ರಮವೊಂದರ ಅರ್ಚಕರಾಗಿರುವ ಯಶವೀರ್ ಮಹಾರಾಜ್ ಎಂಬವರು ಬೇಡಿಕೆಯೊಂದನ್ನು ಮುಂದಿಟ್ಟು, ಮುಸ್ಲಿಂ ವ್ಯವಹಾರಸ್ಥರು ತಮ್ಮ ಮಳಿಗೆಗಳ ಹೊರಗೆ ತಮ್ಮ ಹೆಸರನ್ನು ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದರು.
“ಎಲ್ಲಾ ಮುಸ್ಲಿಮರು ತಮ್ಮ ಹೆಸರುಗಳನ್ನು ದಪ್ಪಕ್ಷರಗಳಲ್ಲಿ ತಮ್ಮ ಹೋಟೆಲ್‌ಗಳು, ಧಾಬಾಗಳು, ಟೀ ಸ್ಟಾಲ್‌ಗಳು ಸಿಹಿತಿಂಡಿ ಅಂಗಡಿಗಳು, ಹಣ್ಣು ತರಕಾರಿ ಗಾಡಿಗಳ ಮುಂದೆ ಬರೆಯುತ್ತಾರೆಂಬ ಆಶ್ವಾಸನೆಯನ್ನು ತಮಗೆ ಮುಝಫ್ಫರನಗರದ ಅಧಿಕಾರಿಗಳು ಜೂನ್ 24ರಂದು ನೀಡಿದ್ದಾರೆಂದು ಈತ ತನ್ನ ಫೇಸ್ಬುಕ್ ಪುಟದಲ್ಲಿ ಬುಧವಾರ ಹೇಳಿಕೊಂಡಿದ್ದಾರೆ.
ಈ ಆದೇಶ ಸಾಮಾಜಿಕ ಅಪರಾಧವಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ. ಈ ವಿಷಯದ ಬಗ್ಗೆ ನ್ಯಾಯಾಲಯಗಳು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. "ಮಾಲಕರ ಹೆಸರು ಗುಡ್ಡು, ಮುನ್ನಾ, ಛೋಟು ಅಥವಾ ಫಟ್ಟೆ ಆಗಿದ್ದರೆ ಏನು? ಈ ಹೆಸರುಗಳಿಂದ ನೀವು ಏನು ಕಂಡುಹಿಡಿಯಬಹುದು?" ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
"ಮುಂದೆ ಏನು? ಮುಸಲ್ಮಾನರು ತಮ್ಮನ್ನು ಗುರುತಿಸಿಕೊಳ್ಳಲು ತಮ್ಮ ತೋಳಿನ ಮೇಲೆ ನಕ್ಷತ್ರ ಧರಿಸಬೇಕೇ? ಮುಂದಿನ ಬಾರಿ ಕನ್ವರ್‌ಗಳು ಅಥವಾ ಅವರ ಕುಟುಂಬಗಳಿಗೆ ವೈದ್ಯರು ಅಥವಾ ರಕ್ತದ ಅಗತ್ಯವಿರುವಾಗ ಅವರಿಗೆ ಚಿಕಿತ್ಸೆ ನೀಡಲು ಇನ್ನೊಬ್ಬ ಕನ್ವರ್‌ರನ್ನು ಹುಡುಕಿ. ಯುಪಿ ಮುಖ್ಯಮಂತ್ರಿಗಳೇ, ಯುಪಿ ಪೊಲೀಸರೇ, ಇದು ಸ್ಪಷ್ಟವಾಗಿ ಕಾನೂನುಬಾಹಿರ ಮತ್ತು ಸಂವಿಧಾನ ವಿರೋಧಿಯಾಗಿದೆ" ಎಂದು ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಆಲ್ಟ್ ನ್ಯೂಸ್ ಸಹ ಸ್ಥಾಪಕ ಝುಬೇರ್ ಪೋಸ್ಟ್ ಒಂದಕ್ಕೆ ಉತ್ತರಿಸುತ್ತಾ, "ನಾವು ಇದನ್ನು ಖಂಡಿಸಿದ್ದೇವೆ. ಅವರು ಇದರಿಂದ ತಪ್ಪಿಸಿಕೊಳ್ಳಬಾರದು. ಯಾರೂ ತಮ್ಮ ಹೆಸರನ್ನು ಪ್ರದರ್ಶಿಸಬಾರದು" ಎಂದು ಮಹುವಾ ಮೊಯಿತ್ರಾ ಬರೆದಿದ್ದಾರೆ.
"ಮುಝಫರ್ ನಗರ ಪೊಲೀಸರೇ, ಇದು ಧರ್ಮದ ಆಧಾರದಲ್ಲಿ ತಾರತಮ್ಯವಲ್ಲವೇ? ಸಣ್ಣಪುಟ್ಟ ಮಾರಾಟಗಾರರು ತಮ್ಮ ಹೆಸರನ್ನು ಪ್ರದರ್ಶಿಸಲು ಕೇಳುತ್ತೀರಾ? ಬೋರ್ಡ್‌ನಲ್ಲಿರುವ ಹೆಸರುಗಳನ್ನು ನೋಡಿ ಈ ಅಂಗಡಿ ಮಾಲೀಕರು ದಾಳಿಗೆ ಗುರಿಯಾದರೆ?" ಎಂದು ಆಲ್ಟ್ ನ್ಯೂಸ್ ನ ಮುಹಮ್ಮದ್ ಝುಬೇರ್ ಪ್ರಶ್ನಿಸಿದ್ದಾರೆ
ಕನ್ವರ್‌ಗಳು ಗೊಂದಲಕ್ಕೀಡಾಗದಂತೆ ನೋಡಿಕಳ್ಳಲು ಯಾವುದೇ ತಿನಿಸುಗಳನ್ನು ಮಾರಾಟ ಮಾಡುವವರು ಅಂಗಡಿಗಳ ಮತ್ತು ಗಾಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯುವ ಆದೇಶ ಹೊರಡಿಸಲಾಗಿದೆ ಎಂದು ಪಶ್ಚಿಮ ಯುಪಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಈ ವರ್ಷದ ಕನ್ವರ್ ಯಾತ್ರೆ ಜುಲೈ 22ರಂದು ಆರಂಭಗೊಂಡು ಆಗಸ್ಟ್ 2ರಂದು ಮುಕ್ತಾಯಗೊಳ್ಳಲಿದೆ.