ಇತರರು ಈಗಲೂ ಅನಿಶ್ಚಿತತೆಯ ಜೀವನದಲ್ಲಿ ನರಳುತ್ತಿದ್ದಾರೆ : ಬಿಡುಗಡೆಯ ಬಳಿಕ ನವ್ಲಾಖಾ

Update: 2024-05-19 16:56 GMT

ಗೌತಮ್ ನವ್ಲಾಖಾ | Photo: scroll.in

ಹೊಸದಿಲ್ಲಿ : ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ತಾನು ಬಂಧಮುಕ್ತನಾಗಿದ್ದರೂ, ಇತರ ಪ್ರಕರಣಗಳಲ್ಲಿ ಸಿಲುಕಿಸಲ್ಪಟ್ಟಿರುವ ಹಲವಾರು ಸಹ ಭಿನ್ನಮತೀಯರ ಭವಿಷ್ಯವು ಈಗಲೂ ಅನಿಶ್ಚಿತವಾಗಿರುವುದು ತನಗೆ ದುಃಖವನ್ನುಂಟು ಮಾಡಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಗೌತಮ ನವ್ಲಾಖಾ(70) ಅವರು ರವಿವಾರ ಹೇಳಿದ್ದಾರೆ.

‘ವಿಚಾರಣೆಗಾಗಿ ಕಾಯುತ್ತಿರುವ ಕೈದಿಗಳಾಗಿ ನಮ್ಮ ಜೀವನದ ಹಲವು ವರ್ಷಗಳನ್ನು ನಮ್ಮಿಂದ ಕಿತ್ತುಕೊಳ್ಳಲಾಗಿದೆ. ವಿಚಾರಣೆ ಮುಗಿಯಲು ಇನ್ನೂ ವರ್ಷಗಳೇ ಬೇಕು ’ ಎಂದು ಬಿಡುಗಡೆಯ ಬಳಿಕ ಬರೆದಿರುವ ಪತ್ರದಲ್ಲಿ ಅವರು ಹೇಳಿದ್ದಾರೆ.

ಗೃಹ ಬಂಧನದ ಸಂದರ್ಭದಲ್ಲಿ ಒದಗಿಸಲಾಗಿದ್ದ ಭದ್ರತೆಯ ವೆಚ್ಚವಾಗಿ 20 ಲಕ್ಷ ರೂ.ಗಳನ್ನು ಪಾವತಿಸಬೇಕು ಎಂಬ ಷರತ್ತಿನೊಂದಿಗೆ ಸರ್ವೋಚ್ಚ ನ್ಯಾಯಾಲಯವು ಮೇ 14ರಂದು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನವ್ಲಾಖಾರಿಗೆ ಜಾಮೀನು ಮಂಜೂರು ಮಾಡಿತ್ತು. ಶನಿವಾರ ರಾತ್ರಿ ಅವರು ಗೃಹ ಬಂಧನದಿಂದ ಬಿಡುಗಡೆಗೊಂಡಿದ್ದಾರೆ.

ಅದೊಂದು ದೀರ್ಘ ಕಾಯುವಿಕೆಯಾಗಿತ್ತು. ಆದರೆ ಆ ಕಾಯುವಿಕೆ ಅನಿವಾರ್ಯವಾಗಿತ್ತು ಎಂದು ನವ್ಲಾಖಾ ಬರೆದಿದ್ದಾರೆ.

2018, ಜನವರಿಯಲ್ಲಿ ಪುಣೆ ಸಮೀಪದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದ ಆರೋಪದಲ್ಲಿ ನವ್ಲಾಖಾ ಸೇರಿದಂತೆ 16 ಮಾನವ ಹಕ್ಕು ಕಾರ್ಯಕರ್ತರು, ವಕೀಲರು, ಸಾಹಿತಿಗಳು ಮತ್ತು ಶಿಕ್ಷಣತಜ್ಞರನ್ನು ಬಂಧಿಸಿ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿತ್ತು. ಅನಾರೋಗ್ಯ ಮತ್ತು ಜೈಲಿನಲ್ಲಿಯ ಕಳಪೆ ಸೌಕರ್ಯಗಳ ಬಗ್ಗೆ ದೂರಿಕೊಂಡಿದ್ದ ನವ್ಲಾಖಾರನ್ನು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ 2022, ನ.19ರಿಂದ ನವಿಮುಂಬೈನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು.

ವಿಚಾರಣಾಧೀನ ಕೈದಿಗಳ ಕುಟುಂಬಗಳು ತಮ್ಮ ಪ್ರೀತಿಪಾತ್ರರಿಂದ ದೂರವಾಗಿ ನೋವನ್ನು ಅನುಭವಿಸುತ್ತಾರೆ ಮತ್ತು ಅವರ ಬದುಕು ಅಸ್ತವ್ಯಸ್ತಗೊಳುತ್ತದೆ. ಇದು ಅಪರೂಪಕ್ಕೆ ಒಪ್ಪಿಕೊಳ್ಳಲಾಗಿರುವ ಕಟು ವಾಸ್ತವವಾಗಿದೆ ಎಂದು ಹೇಳಿರುವ ನವ್ಲಾಖಾ,‘ ನ್ಯಾಯವು ದೂರದ ಕನಸಾಗಿ ಗೋಚರಿಸುತ್ತಿರುವುದು ಪ್ರಜಾಪ್ರಭುತ್ವದ ಹಕ್ಕುಗಳ ಕಾರ್ಯಕರ್ತನಾಗಿ ನನಗೆ ಆತಂಕವನ್ನುಂಟು ಮಾಡಿದೆ. ಅತಿಯಾದ ಹೊರೆಯನ್ನು ಹೊಂದಿರುವ ನ್ಯಾಯಾಂಗಕ್ಕೆ ತ್ವರಿತ,ನ್ಯಾಯಸಮ್ಮತ ವಿಚಾರಣೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಒಂದೇ ದಿನದ ಸ್ವಾತಂತ್ರ್ಯ ಹರಣವೂ ಅತಿ ಹೆಚ್ಚು ಎಂಬ ಉದಾತ್ತ ಹೇಳಿಕೆಯನ್ನು ನ್ಯಾಯಾಂಗವು ನೀಡಬಹುದು ಎಂದು ಓರ್ವ ಕೈದಿಯಾಗಿ ನಾನು ಆಗಾಗ್ಗೆ ಆಶಿಸುತ್ತಿದ್ದೆ. ಏಕೆಂದರೆ ಇಂತಹ ಹೇಳಿಕೆ ವಿಚಾರಣಾಧೀನ ಕೈದಿಗಳಿಗೆ ಭರವಸೆಯ ಆಶಾಕಿರಣವಾಗುತ್ತಿತ್ತು’ ಎಂದೂ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News