ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿದರೂ ಕಾಂಗ್ರೆಸ್ ಜೊತೆ ಮೈತ್ರಿ ಏರ್ಪಡಲಿದೆ: ಆಪ್
ಹೊಸದಿಲ್ಲಿ: ಈ ವಾರದೊಳಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಲಾಗುತ್ತದೆ ಎಂದು ಶುಕ್ರವಾರ ಒತ್ತಿ ಹೇಳಿರುವ ದಿಲ್ಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್, ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯು ಫಲಪ್ರದವಾಗಿದ್ದು, ನಾವು ತನಿಖಾ ಸಂಸ್ಥೆಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೌರಭ್ ಗುಪ್ತ, "ಒಂದು ವೇಳೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿಲುವಿಗೆ ಆಪ್ ಏನಾದರೂ ಅಂಟಿಕೊಂಡರೆ, ಇನ್ನೆರಡು ಮೂರು ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಲಾಗುತ್ತದೆ ಎಂಬ ಮಾಹಿತಿಯನ್ನು ಆಪ್ ಸ್ವೀಕರಿಸಿದೆ" ಎಂದು ಆರೋಪಿಸಿದ್ದಾರೆ.
"ವಿವಿಧ ರಾಜ್ಯಗಳಲ್ಲಿ ಆಪ್ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಕ್ಷಣವೇ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಲಾಗುತ್ತದೆ. ಇಂದು ಸಂಜೆ ಅಥವಾ ನಾಳೆಯೊಳಗೆ ಕೇಜ್ರಿವಾಲ್ ಬಂಧನಕ್ಕೆ ನೋಟಿಸ್ ಅನ್ನು ಜಾರಿಗೊಳಿಸಲಾಗುತ್ತದೆ ಎಂದು ನಮಗೆ ತಿಳಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸೌರಭ್ ಭಾರದ್ವಾಜ್, ಕಾಂಗ್ರೆಸ್ ಹಾಗೂ ಆಪ್ ಒಟ್ಟುಗೂಡುತ್ತಿರುವುದರಿಂದ ಬಿಜೆಪಿಗೆ ಹೆದರಿಕೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.