ಕ್ಲೋರಿನ್ ಅನಿಲ ಸೋರಿಕೆ: ಡೆಹ್ರಾಡೂನ್‌ನ ಝಂಜ್ರ ಪ್ರದೇಶದ ನಿವಾಸಿಗಳ ಸ್ಥಳಾಂತರ
ಡೆಹ್ರಾಡೂನ್: ಕ್ಲೋರಿನ್ ಅನಿಲ್ ಸೋರಿಕೆಯಿಂದ ಹಲವಾರು ಜನರು ಉಸಿರಾಟದ ಸಮಸ್ಯೆ ಎದುರಿಸಿದ ನಂತರ ಡೆಹ್ರಾಡೂನ್‌ನ ಝಂಜ್ರ ಪ್ರದೇಶದ ನಿವಾಸಿಗಳನ್ನು ಇಂದು ಸ್ಥಳಾಂತರಿಸಲಾಗಿದೆ. ಎಲ್ಲಾ ನಿವಾಸಿಗಳನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು ಯಾರಿಗೂ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಇತರ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಹೇಳಿದ್ದಾರೆ.
ಡೆಹ್ರಾಡೂನ್‌ನ ಪ್ರೇಮ್‌ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಝಂಜ್ರಾ ಪ್ರದೇಶದ ಖಾಲಿ ಸ್ಥಳವೊಂದರಲ್ಲಿ ಇರಿಸಲಾಗಿದ್ದ ಕ್ಲೋರಿನ್ ಸಿಲಿಂಡರಿನಲ್ಲಿ ಸೋರಿಕೆಯುಂಟಾದ ನಂತರ ಜನರು ಉಸಿರಾಟದ ಸಮಸ್ಯೆ ಎದುರಿಸಿದ್ದರು. ಈ ಸಿಲಿಂಡರ್ ಅನ್ನು ಸುರಕ್ಷಿತವಾಗಿ ವಿಲೇವಾರಿಗೊಳಿಸುವ ಕ್ರಮಕೈಗೊಳ್ಳಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.