ವಕ್ಫ್(ತಿದ್ದುಪಡಿ) ಮಸೂದೆ ಕುರಿತ ಕರಡು ವರದಿ ಅಂಗೀಕರಿಸಿದ ಜಂಟಿ ಸಂಸದೀಯ ಸಮಿತಿ
![ವಕ್ಫ್(ತಿದ್ದುಪಡಿ) ಮಸೂದೆ ಕುರಿತ ಕರಡು ವರದಿ ಅಂಗೀಕರಿಸಿದ ಜಂಟಿ ಸಂಸದೀಯ ಸಮಿತಿ ವಕ್ಫ್(ತಿದ್ದುಪಡಿ) ಮಸೂದೆ ಕುರಿತ ಕರಡು ವರದಿ ಅಂಗೀಕರಿಸಿದ ಜಂಟಿ ಸಂಸದೀಯ ಸಮಿತಿ](https://www.varthabharati.in/h-upload/2025/01/29/1500x900_1318783-jpc.webp)
Photo credit: IANS
ಹೊಸದಿಲ್ಲಿ : ವಕ್ಫ್(ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯು ಬಹುಮತದೊಂದಿಗೆ ವಕ್ಫ್ (ತಿದ್ದುಪಡಿ) ಮಸೂದೆ ಕರಡನ್ನು ಅಂಗೀಕರಿಸಿದೆ ಎಂದು ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಹೇಳಿದ್ದಾರೆ.
ಜಂಟಿ ಸಂಸದೀಯ ಸಮಿತಿಯ 16 ಸದಸ್ಯರು ಕರಡು ಮಸೂದೆ ಪರವಾಗಿ ಮತ ಚಲಾಯಿಸಿದರೆ, 11 ಸದಸ್ಯರು ವಿರೋಧವಾಗಿ ಮತವನ್ನು ಚಲಾಯಿಸಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಹೇಳಿದ್ದಾರೆ.
ಈ ಕುರಿತು ಭಿನ್ನಾಭಿಪ್ರಾಯವನ್ನು ಸಲ್ಲಿಸಲು ಬುಧವಾರ ಸಂಜೆ 4 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಇಲ್ಲಿಯವರೆಗೆ ತೃಣಮೂಲ ಕಾಂಗ್ರೆಸ್ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ನದೀಮುಲ್ ಹಕ್, ಡಿಎಂಕೆ ಸಂಸದ ಎ ರಾಜಾ, ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಶಿವಸೇನಾ (ಯುಬಿಟಿ)ಸಂಸದ ಅರವಿಂದ್ ಸಾವಂತ್ ಅವರು ಔಪಚಾರಿಕವಾಗಿ ತಮ್ಮ ಭಿನ್ನಾಭಿಪ್ರಾಯವನ್ನು ಸಲ್ಲಿಸಿದ್ದಾರೆ.
ಪ್ರತಿಪಕ್ಷದ ಸದಸ್ಯರು ಜಂಟಿ ಸಂಸದೀಯ ಸಮಿತಿಯ ಪ್ರಕ್ರಿಯೆಯನ್ನು ಟೀಕಿಸಿದ್ದು, ಅಂತಿಮ ವರದಿಯನ್ನು ಪರಿಶೀಲಿಸಲು ಅಲ್ಪ ಅವಧಿಯನ್ನು ಮಾತ್ರ ನೀಡಲಾಗಿದೆ. ಈ ಪ್ರಕ್ರಿಯೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ಕುರಿತು ವಿರೋಧ ಪಕ್ಷದ ಸಂಸದರು ಭಿನ್ನಾಭಿಪ್ರಾಯ ಸಲ್ಲಿಸಲಿದ್ದಾರೆ ಎಂದು ಶಿವಸೇನಾ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ.
ಜಗದಾಂಬಿಕಾ ಪಾಲ್ ಅವರು ಪರಿಷ್ಕೃತ ಮಸೂದೆಯನ್ನು ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸುವ ನಿರೀಕ್ಷೆಯಿದೆ. ವಕ್ಫ್(ತಿದ್ದುಪಡಿ) ಮಸೂದೆ-2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದರು. ಮಸೂದೆಯನ್ನು 2024ರ ಆಗಸ್ಟ್ 8ರಂದು ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ಉಲ್ಲೇಖಿಸಲಾಗಿತ್ತು.