ಪಾಟ್ನಾ| ಶಾಲಾ ಆವರಣದ ಚರಂಡಿಯಲ್ಲಿ 3 ವರ್ಷದ ಬಾಲಕನ ಮೃತದೇಹ ಪತ್ತೆ; ಶಾಲೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

Update: 2024-05-17 09:56 GMT

PC : NDTV 

ಪಾಟ್ನಾ; ಪಾಟ್ನಾದ ಖಾಸಗಿ ಶಾಲಾ ಆವರಣವೊಂದರಲ್ಲಿ 3 ವರ್ಷದ ಬಾಲಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಇದರಿಂದ ಕುಪಿತಗೊಂಡು ನಾಗರಿಕರು ಪಾಟ್ನಾದ ಬೀದಿಗಿಳಿದು, ಪ್ರತಿಭಟಿಸಿರುವ ಘಟನೆ ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಶಾಲೆಗೆ ತೆರಳಿದ್ದ ಬಾಲಕನು ಮನೆಗೆ ಮರಳದಿದ್ದರಿಂದ ಆತಂಕಗೊಂಡ ಪೋಷಕರು ತೀವ್ರ ಶೋಧ ಕಾರ್ಯ ನಡೆಸಿದ ಸಂದರ್ಭದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಪೋಷಕರು ಶಾಲೆಯ ಬಳಿಗೆ ಧಾವಿಸಿ, ಮಗುವಿನ ಕುರಿತು ವಿಚಾರಿಸಲು ತೊಡಗಿದಾಗ, ಶಾಲಾ ಪ್ರಾಧಿಕಾರಗಳು ಅವರ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಅವರಲ್ಲಿ ಶಂಕೆ ಮೂಡಿದೆ. ಇದರಿಂದ ಕುಟುಂಬದ ಸದಸ್ಯರ ಕಳವಳ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಪೋಷಕರು ತಮ್ಮ ಶೋಧ ಕಾರ್ಯವನ್ನು ಮುಂದುವರಿಸಿದಾಗ, ಈ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಶಾಲಾ ಆವರಣದೊಳಗಿನ ಮುಚ್ಚಿದ್ದ ಚರಂಡಿಯಲ್ಲಿ ಮೂರು ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದೆ.

ಉದ್ವಿಗ್ನ ಪರಿಸ್ಥಿತಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಕುರಿತು ಪ್ರತಿಕ್ರಿಯಿಸಿರುವ ಪಾಟ್ನಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರ ಪ್ರಕಾಶ್, ಮಗುವೊಂದು ಶಾಲೆಯನ್ನು ಪ್ರವೇಶಿಸಿ, ನಂತರ ಅಲ್ಲಿಂದ ನಾಪತ್ತೆಯಾಗಿರುವ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

“ಸಿಸಿಟಿವಿ ದೃಶ್ಯಾವಳಿಯಲ್ಲಿ ನಾವು ಮಗುವು ಶಾಲೆ ಪ್ರವೇಶಿಸುತ್ತಿರುವುದನ್ನು ಕಂಡೆವಾದರೂ, ಯಾವ ಹಂತದಲ್ಲೂ ಆ ಮಗು ಶಾಲೆಯಿಂದ ಹೊರಬಂದಿರುವುದು ಕಂಡು ಬಂದಿಲ್ಲ. ಮೃತದೇಹವನ್ನು ಬಚ್ಚಿಟ್ಟಿರುವುದರಿಂದ, ಇದು ಕ್ರಿಮಿನಲ್ ಉದ್ದೇಶವಾಗಿದ್ದು, ನಾವಿದನ್ನು ಹತ್ಯಾ ಪ್ರಕರಣವನ್ನಾಗಿ ತನಿಖೆ ನಡೆಸುತ್ತೇವೆ. ಈ ಸಂಬಂಧ ನಾವು ಮೂವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಪ್ರಗತಿಯಲ್ಲಿದೆ” ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆದರೆ, ತ್ವರಿತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮೃತ ಬಾಲಕನ ಕುಟುಂಬದ ಸದಸ್ಯರು ಹಾಗೂ ಸಮುದಾಯದ ಸದಸ್ಯರು ಬೀದಿಗಿಳಿದರು. ಹಲವಾರು ವಾಹನಗಳು ಹಾಗೂ ಶಾಲೆಯ ಗೋಡೆಯ ಕೆಲವು ಭಾಗಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು. ಶಾಲೆಗೆ ತೆರಳುವ ಮಾರ್ಗಗಳನ್ನೆಲ್ಲ ಬಂದ್ ಮಾಡಿ, ತಮ್ಮ ಆಕ್ರೋಶವನ್ನು ಹೊರ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News