ಬಿಹಾರ ಜಾತಿ ಗಣತಿಯನ್ನು ಎತ್ತಿ ಹಿಡಿದ ಪಾಟ್ನಾ ಹೈಕೋರ್ಟ್
ಪಾಟ್ನಾ: ಬಿಹಾರ ಸರಕಾರವು ಈ ವರ್ಷದ ಆದಿ ಭಾಗದಲ್ಲಿ ಆರಂಭಿಸಿದ್ದ ಜಾತಿ ಆಧಾರಿತ ಸಮೀಕ್ಷೆಯನ್ನು ಪಾಟ್ನಾ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
ಜಾತಿ ಗಣತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ಮುಖ್ಯ ನ್ಯಾಯಾಧೀಶ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಅವರನ್ನೊಳಗೊಂಡ ನ್ಯಾಯಪೀಠವೊಂದು ವಜಾಗೊಳಿಸಿತು.
ಜಾತಿ ಗಣತಿಯ ಮೊದಲ ಹಂತವು ಜನವರಿ 7ರಂದು ಆರಂಭಗೊಂಡಿತ್ತು. ಆದರೆ, ಗಣತಿಯ ಎರಡನೇ ಹಂತ ಸಾಗುತ್ತಿದ್ದಾಗ ಮೇ ತಿಂಗಳಲ್ಲಿ ಅದಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಬಿಹಾರ ಸರಕಾರವು ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ, ಆ ವೇಳೆಗೆ ಈ ವಿಷಯದ ಕುರಿತ ತೀರ್ಪನ್ನು ಹೈಕೋರ್ಟ್ ಕಾದಿರಿಸಿದ್ದರಿಂದ ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಜಾತಿ ಗಣತಿಯಿಂದ ಎಲ್ಲಾ ಸಮುದಾಯಗಳಿಗೆ ಪ್ರಯೋಜನವಾಗುವುದು ಎಂದು ಮೊದಲ ಹಂತದ ಸಮೀಕ್ಷೆಯ ಆರಂಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದರು. ರಾಜ್ಯದಲ್ಲಿರುವ ಜಾತಿಗಳು ಮತ್ತು ಸಮುದಾಯಗಳ ವಿವರವಾದ ಮಾಹಿತಿಗಳನ್ನು ಸಮೀಕ್ಷೆಯು ನೀಡುವುದು ಹಾಗೂ ಇದು ಅಭಿವೃದ್ಧಿಗೆ ನೆರವು ನೀಡುವುದು ಎಂದು ಅವರು ಹೇಳಿದ್ದರು.
ಭಾರತದಲ್ಲಿ ಕೊನೆಯ ಜಾತಿ ಗಣತಿ 1931ರಲ್ಲಿ ನಡೆದಿತ್ತು. ಆದರೆ, ಸ್ವತಂತ್ರ ಭಾರತದಲ್ಲಿ ನಡೆದ ಜನಗಣತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯನ್ನು ಮಾತ್ರ ಪ್ರತ್ಯೇಕವಾಗಿ ದಾಖಲಿಸಲಾಗುತ್ತಿತ್ತು.