ಶರದ್ ಪವಾರ್ ಗೆ ಅಳಿಯನಿಂದ ಕೇಂದ್ರ ಸಂಪುಟ ಸ್ಥಾನದ ಆಮಿಷ: ಕಾಂಗ್ರೆಸ್ ಮಾಜಿ ಸಿಎಂ

Update: 2023-08-16 03:04 GMT

ಮುಂಬೈ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಮಾವ ಹಾಗೂ ಎನ್ ಸಿಪಿ ನಾಯಕ ಶರದ್ ಪವಾರ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಕೊಡಿಸುವ ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ.

ಇವರ ಪ್ರಕಾರ, ಶರದ್ ಪವಾರ್ ಅವರನ್ನು ಕೃಷಿ ಸಚಿವರಾಗಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳಿಸುವುದಾಗಿ ಅಥವಾ ರಾಷ್ಟ್ರೀಯ ನೀತಿ ಆಯೋಗದ ಅಧ್ಯಕ್ಷ ಹುದ್ದೆಯನ್ನು ಕೊಡಿಸುವುದಾಗಿ ರಹಸ್ಯ ಭೇಟಿ ವೇಳೆ ಅಜಿತ್ ಪವಾರ್ ಆಫರ್ ನೀಡಿದ್ದರು. ಜತೆಗೆ ಎನ್ ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಅವರಿಗೆ ಕೇಂದ್ರ ಹಾಗೂ ಪವಾರ್ ಪುತ್ರಿ ಸುಪ್ರಿಯಾ ಸುಳೇ ಅವರಿಗೆ ರಾಜ್ಯ ಸಂಪುಟದಲ್ಲಿ ಸ್ಥಾನ ನೀಡುವ ಆಮಿಷ ಒಡ್ಡಿದ್ದು, ಇದನ್ನು ಪವಾರ್ ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಜತೆ ಯಾವುದೇ ವಿಧದಲ್ಲಿ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಪವಾರ್ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್ನ ಮಾಜಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಮಹಾ ವಿಕಾಸ ಅಘಾಡಿ ಬಿಜೆಪಿ ವಿರುದ್ಧದ ಮಿಷನ್ ಘೋಷಿಸಿದ ಸಂದರ್ಭದಲ್ಲಿ ಶಿಂಧೆ- ಫಡ್ನವೀಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರನ್ನು ಶರದ್ ಪವಾರ್ ರಹಸ್ಯವಾಗಿ ಭೇಟಿಯಾಗಿರುವ ಬಗ್ಗೆ ಕಾಂಗ್ರೆಸ್ ಹಾಗೂ ಶಿವಸೇನೆ ಯುಬಿಟಿ ಅಸಮಾಧಾನ ವ್ಯಕ್ತಪಡಿಸಿದ್ದವು.

ಆದರೆ ಮಾವ- ಅಳಿಯ ಭೇಟಿಯಲ್ಲಿ ಯಾವುದೇ ತಪ್ಪಿಲ್ಲ ಎಂದು ಉಭಯ ಮುಖಂಡರು ಸಮರ್ಥಿಸಿಕೊಂಡಿದ್ದರು. "ಅಜಿತ್ ಪವಾರ್ ನನ್ನ ಅಳಿಯ. ಮಾವ ಅಳಿಯನನ್ನು ಭೇಟಿಯಾದರೆ ಅದಕ್ಕೆ ಯಾಕೆ ಬೊಬ್ಬೆ ಹೊಡೆಯಬೇಕು" ಎಂದು ಪವಾರ್ ಪ್ರಶ್ನಿಸಿದ್ದರು. ಪವಾರ್ ಅವರ ಬೆಂಬಲವಿಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ 35-40 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಗೆ ಅಸಾಧ್ಯ ಎನ್ನುವುದು ಬಿಜೆಪಿಗೆ ಮನವರಿಕೆಯಾಗಿದೆ ಎನ್ನುವುದು ಯುಬಿಟಿ ಸೇನಾ ಮುಖಂಡರ ಹೇಳಿಕೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News