ಮಾರುಕಟ್ಟೆಯಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ರೀಪ್ಯಾಕಿಂಗ್ ಕಳವಳಕಾರಿ : ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ : ಹೊಸದಾದ ಅವಧಿ ತೀರುವ ದಿನಾಂಕಗಳನ್ನು ಹೊಂದಿರುವ, ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ರೀಪ್ಯಾಕಿಂಗ್ ಮತ್ತು ರೀಬ್ರ್ಯಾಂಡಿಂಗ್ ಮೂಲಕ ಮಾರುಕಟ್ಟೆಗೆ ಮರುಪರಿಚಯಿಸುತ್ತಿರುವ ಪ್ರವೃತ್ತಿಯ ಬಗ್ಗೆ ಮಂಗಳವಾರ ಕಳವಳ ವ್ಯಕ್ತಪಡಿಸಿದ ದಿಲ್ಲಿ ಹೈಕೋರ್ಟ್, ಜನರು ಕಲಬೆರಕೆ ಆಹಾರವನ್ನು ಸೇವಿಸುವಂತೆ ಮಾಡಲಾಗದು ಎಂದು ಎಚ್ಚರಿಸಿದೆ.
ಅವಧಿ ಮೀರಿದ ಉತ್ಪನ್ನಗಳ ಮಾರಾಟ ಮಾಡಲು ಯಾರಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಹಾಗೂ ಇದು ವ್ಯಾಪಾರವಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
“ದಿಲ್ಲಿಯ ಜನರು ಕಲಬೆರಕೆ ಆಹಾರವನ್ನು ಸೇವಿಸಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು ಎಂಬ ಕುರಿತು ನಮಗೆ ಸಲಹೆ ನೀಡಿ” ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾ. ತುಷಾರ್ ರಾವ್ ಅವರನ್ನೊಳಗೊಂಡ ನ್ಯಾಯಪೀಠ ಕೋರಿತು.
ಅವಧಿ ಮೀರಿದ ಉತ್ಪನ್ನಗಳನ್ನು ಮರು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸುತ್ತಿದೆ.
ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿಯಾಗಿ ನೆರವು ನೀಡುತ್ತಿರುವ ವಕೀಲೆ ಶ್ವೇತಾಶ್ರೀ ಮಝುಂದಾರ್, ಈ ಸಂಬಂಧ ನ್ಯಾಯಾಲಯಕ್ಕೆ ವರದಿಯೊಂದನ್ನು ಸಲ್ಲಿಸಿದರು. ಪ್ಯಾಕ್ ಮಾಡಿದ ಎಲ್ಲ ಆಹಾರ ಉತ್ಪನ್ನಗಳ ಮೇಲೆ ತಯಾರಕರು ಕ್ಯೂಆರ್ ಕೋಡ್ ಅನ್ನು ಮುದ್ರಿಸುವುದರಿಂದ, ಅಂತಹ ಉತ್ಪನ್ನಗಳ ಮೂಲ ಅವಧಿ ಮೀರುವ ದಿನಾಂಕಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಅವರು ತಮ್ಮ ವರದಿಯಲ್ಲಿ ಸಲಹೆ ನೀಡಿದ್ದಾರೆ.
ಕಲಬೆರಕೆ ಸಂಬಂಧ ಈಗಾಗಲೇ ಶಾಸನ ಜಾರಿಯಲ್ಲಿದ್ದರೂ, ಶಾಸನ ಉಲ್ಲಂಘನೆಗೆ ನಿಗದಿಪಡಿಸಲಾಗಿರುವ ದಂಡ ಅವನ್ನು ತಡೆಯುವಷ್ಟು ಬಲಿಷ್ಠವಾಗಿಲ್ಲ. ಹೀಗಾಗಿ ಅವುಗಳಿಗೆ ವಿಧಿಸಲಾಗುತ್ತಿರುವ ದಂಡವನ್ನು ಮತ್ತಷ್ಟು ಕಠಿಣವಾಗಿಸಬೇಕಿದೆ ಎಂದೂ ಅವರು ಸಲಹೆ ನೀಡಿದ್ದಾರೆ.
ಈ ವಿಷಯದ ಕುರಿತು ಇತ್ತೀಚಿನ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿದ ನ್ಯಾಯಪೀಠವು, ಮರು ಪ್ಯಾಕ್ ಮಾಡುವ ಮೂಲಕ ಅವಧಿ ಮೀರಿದ ಚಾಕೊಲೇಟ್ ಅನ್ನು ಮಾರಾಟ ಮಾಡುತ್ತಿರುವ ಆರೋಪಕ್ಕೆ ಗುರಿಯಾಗಿರುವ ಕೆಲವು ನಿರ್ಧಿಷ್ಟ ನಕಲಿ ಬ್ರಾಂಡ್ ತಯಾರಕರು ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿರಬೇಕು ಎಂದು ನಿರ್ದೇಶನ ನೀಡಿತು.