ಮಣಿಪುರದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ಮೋದಿ ಸರಕಾರಕ್ಕೆ ಸಹಾನುಭೂತಿಯಿಲ್ಲ ಎಂಬುದೀಗ ಜನರಿಗೆ ತಿಳಿದಿದೆ: ಮಲ್ಲಿಕಾರ್ಜುನ ಖರ್ಗೆ

Update: 2024-05-03 16:22 GMT

ಮಲ್ಲಿಕಾರ್ಜುನ ಖರ್ಗೆ | PC : PTI 

ಹೊಸದಿಲ್ಲಿ: ಮಣಿಪುರದ ಸ್ಥಿತಿಯ ಕುರಿತು ಶುಕ್ರವಾರ ಪ್ರಧಾನಿ ಮೋದಿ ಮೇಲೆ ದಾಳಿ ನಡೆಸಿರುವ ಕಾಂಗ್ರೆಸ್, ಮಣಿಪುರ ಪರಿಸ್ಥಿತಿಯ ಬಗ್ಗೆ ಅವರ ಸರಕಾರವು ನಿರಾಸಕ್ತಿ ಹಾಗೂ ಪಶ್ತಾತಾಪರಹಿತ ವರ್ತನೆಯನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿ ಕಾರಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಣಿಪುರ ಸಂಘರ್ಷವು ನಿಖರವಾಗಿ ಒಂದು ವರ್ಷದ ಹಿಂದೆ, ಮೇ 3, 2023ರಂದು ಸ್ಫೋಟಗೊಂಡಿತ್ತು ಎಂಬ ಸಂಗತಿಯನ್ನು ಉಲ್ಲೇಖಿಸಿದ್ದಾರೆ.

"ನಿರಾಸಕ್ತ ಮೋದಿ ಸರಕಾರ ಹಾಗೂ ಅಸಮರ್ಥ ರಾಜ್ಯ ಬಿಜೆಪಿ ಸರಕಾರದ ಕ್ರೂರ ಜೋಡಿಯು ರಾಜ್ಯವನ್ನು ಎರಡು ಪಂಗಡಗಳನ್ನಾಗಿ ವಿಭಜಿಸಿದ್ದರಿಂದ ಮಣಿಪುರದಲ್ಲಿ ಮಾನವೀಯತೆ ಅವಸಾನವಾಯಿತು. ತಮ್ಮ ಅದಕ್ಷತೆ ಹಾಗೂ ಉದಾಸೀನತೆಯ ಪ್ರಮಾಣ ಬಯಲಾಗುತ್ತದೆ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಈ ಗಡಿ ರಾಜ್ಯಕ್ಕೆ ಕಾಲಿಟ್ಟಿಲ್ಲ. ಅವರ ದುರಹಂಕಾರವು ಸುಂದರ ರಾಜ್ಯವೊಂದರ ಸಾಮಾಜಿಕ ಹೆಣಿಗೆಯನ್ನು ಹಾನಿಗೊಳಿಸಿತು" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮಣಿಪುರದ ಎಲ್ಲ ಸಮುದಾಯಗಳಿಗೂ ಇದೀಗ ಬಿಜೆಪಿ ಹೇಗೆ ತಮ್ಮ ಬದುಕನ್ನು ದುಸ್ತರಗೊಳಿಸಿತು ಎಂಬ ಸಂಗತಿ ಅರಿವಾಗಿದೆ ಎಂದೂ ಖರ್ಗೆ ಒತ್ತಿ ಹೇಳಿದ್ದಾರೆ.

"ಇದೀಗ ಮೋದಿ ಸರಕಾರದ ಅಭಿವೃದ್ಧಿಯ ಡಂಗುರವು ಈ ಪ್ರಾಂತ್ಯದ ಮಾನವೀಯತೆಯನ್ನು ಮುಳುಗಿಸಿದೆ ಎಂಬ ಸಂಗತಿ ಈಶಾನ್ಯ ರಾಜ್ಯಗಳ ಜನರಿಗೆ ಅರ್ಥವಾಗಿದೆ. ಮಣಿಪುರದಲ್ಲಿ ತಾವು ನಾಶ ಮಾಡಿದ ಅಸಂಖ್ಯಾತ ಜೀವಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಅವರ ಸರಕಾರಕ್ಕೆ ಕಿಂಚಿತ್ತೂ ಸಹಾನುಭೂತಿ ಇಲ್ಲ ಎಂಬುದು ಭಾರತೀಯರಿಗೆ ಇದೀಗ ಅರ್ಥವಾಗಿದೆ" ಎಂದೂ ಅವರು ಟೀಕಿಸಿದ್ದಾರೆ.

ಮಣಿಪುರ ಘರ್ಷಣೆಯಲ್ಲಿ 220ಕ್ಕೂ ಹೆಚ್ಚು ಮಂದಿ ಹತ್ಯೆಗೀಡಾಗಿದ್ದು, 60,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಈಗಲೂ ಸಹಸ್ರಾರು ಮಹಿಳೆಯರು ಹಾಗೂ ಮಕ್ಕಳು ನಿರಾಶ್ರಿತರ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News