ಸೋನಿಯಾ ಗಾಂಧಿ ಸಂಸದರ ನಿಧಿಯಿಂದ ಶೇ. 70ಕ್ಕೂ ಅಧಿಕ ಮೊತ್ತವನ್ನು ಅಲ್ಪಸಂಖ್ಯಾತರಿಗಾಗಿ ಬಳಸಿದ್ದಾರೆ: ಅಮಿತ್ ಶಾ ಆರೋಪ
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಸಂಸದರ ನಿಧಿಯ ಕನಿಷ್ಠ ಶೇ 70ರಷ್ಟು ಮೊತ್ತವನ್ನು ಅಲ್ಪಸಂಖ್ಯಾತರಿಗಾಗಿ ಬಳಸಿದ್ದಾರೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ರಾಯ್‌ಬರೇಲಿಯ ಜನರು ತಮ್ಮ ಜೊತೆಗೆ ಉಳಿದುಕೊಳ್ಳುವ ಸ್ಥಳೀಯ ಅಭ್ಯರ್ಥಿಯನ್ನು ಆರಿಸಬೇಕೇ ಹೊರತು, ಮುಂದಿನ ಐದು ವರ್ಷಗಳ ಕಾಲ ನಾಪತ್ತೆಯಾಗುವ ಹೊರಗಿನವರನ್ನಲ್ಲ ಎಂದು ಅವರು ಹೇಳಿದ್ದಾರೆ.
ರವಿವಾರ ರಾಯ್ ಬರೇಲಿಯಲ್ಲಿ ರ‍್ಯಾಲಿಯೊಂದನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. “ನೀವು ಗಾಂಧಿ ಕುಟುಂಬಕ್ಕೆ ವರ್ಷಗಳ ಕಾಲ ಅವಕಾಶ ನೀಡಿದಿರಿ, ಆದರೆ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಹಝಾದಾ (ರಾಜಕುಮಾರ) ಇಲ್ಲಿಗೆ ಬಂದು ಮತಯಾಚಿಸಿದ್ದಾರೆ. ನೀವು ಹಲವು ವರ್ಷಗಳಿಂದ ಮತದಾನ ಮಾಡಿದ್ದೀರಿ. ಸಂಸದರ ನಿಧಿಯಿಂದ ನಿಮಗೇನಾದರೂ ಸಿಕ್ಕಿತೇ? ಸಿಕ್ಕಿದ್ದೇ ಆದಲ್ಲಿ ಅದು ಎಲ್ಲಿಗೆ ಹೋಗಿದೆ? ಅದು ಅವರ ಮತ ಬ್ಯಾಂಕ್‌ಗೆ ಹೋಗಿದೆ. ಸೋನಿಯಾ ಗಾಂಧಿ ತಮ್ಮ ಶೇ 70ಕ್ಕೂ ಅಧಿಕ ಸಂಸದರ ನಿಧಿಯನ್ನು ಅಲ್ಪಸಂಖ್ಯಾತರಿಗಾಗಿ ಬಳಸಿದ್ದಾರೆ” ಎಂದು ಅಮಿತ್ ಶಾ ಹೇಳಿದರು.
ಗಾಂಧಿ ಕುಟುಂಬವು ಸುಳ್ಳು ಹೇಳುವುದರಲ್ಲಿ ನಿಷ್ಣಾತರಾಗಿದ್ದಾರೆ ಎಂದು ಹೇಳಿದ ಅಮಿತ್ ಶಾ “ ಅವರು ಈಗ ಪ್ರತಿ ಮಹಿಳೆಗೆ ರೂ 1 ಲಕ್ಷ ನೀಡುವುದಾಗಿ ಹೇಳಿದ್ದಾರೆ. ತೆಲಂಗಾಣ ಚುನಾವಣೆ ವೇಳೆ ಪ್ರತಿ ಮಹಿಳೆಗೆ ರೂ 15000 ಆಶ್ವಾಸನೆ ನೀಡಿದ್ದರು. ರಾಯ್ ಬರೇಲಿ ಜನರು ವರ್ಷಗಳಿಂದ ಗಾಂಧಿ ಮತ್ತು ನೆಹರು ಕುಟುಂಬದವರನ್ನು ಆರಿಸಿದೆ. ಇಲ್ಲಿಂದ ಆಯ್ಕೆಯದ ನಂತರ ಸೋನಿಯಾ ಜಿ ಮತ್ತು ಅವರ ಕುಟುಂಬ ರಾಯ್ ಬರೇಲಿಗೆ ಎಷ್ಟು ಬಾರಿ ಬಂದಿದೆ?” ಎಂದು ಅವರು ಪ್ರಶ್ನಿಸಿದರು.