ಜಮ್ಮು ಕಾಶ್ಮೀರದಲ್ಲಿ 2021ರಿಂದೀಚಿನ ಉಗ್ರವಾದ ಘಟನೆಗಳಲ್ಲಿ ಭದ್ರತಾ ಸಿಬ್ಬಂದಿಗಳ ಶೇ. 40ರಷ್ಟು ಹತ್ಯೆಗಳು ಜಮ್ಮು ವಿಭಾಗದಲ್ಲಿ ನಡೆದಿವೆ: ವರದಿ
ಜಮ್ಮು: ಕಳೆದ ಮೂರು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ 117 ಸಿಬ್ಬಂದಿಗಳು ಉಗ್ರರಿಂದ ಹತ್ಯೆಗೀಡಾಗಿದ್ದಾರೆ ಹಾಗೂ ಈ ಹತ್ಯೆಗಳಲ್ಲಿ ಶೇ40ರಷ್ಟು ಜಮ್ಮು ವಿಭಾಗದಿಂದ ವರದಿಯಾಗಿವೆ ಎಂದು thehindu.com ಲಭ್ಯ ಅಂಕಿಅಂಶಗಳ ಆಧಾರದಲ್ಲಿ ವರದಿ ಮಾಡಿದೆ.
ಸೋಮವಾರ ಜಮ್ಮು ನಗರದಿಂದ ಸುಮಾರು 160 ಕಿಮೀ ದೂರದಲ್ಲಿರುವ ದೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶದಲ್ಲಿ ಓರ್ವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ಕು ಜವಾನರನ್ನು ಉಗ್ರರು ಹತ್ಯೆಗೈದಿದ್ದಾರೆ.
2021ರಿಂದ ಕನಿಷ್ಠ 51 ಭದ್ರತಾ ಸಿಬ್ಬಂದಿಗಳು ಪೂಂಚ್, ರಜೌರಿ, ಕಥುವಾ, ರೀಸಿ, ದೋಡಾ ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ಉಗ್ರವಾದ ಸಂಬಂಧಿ ಘಟನೆಗಳಲ್ಲಿ ಬಲಿಯಾಗಿದ್ದರು. ಇಂತಹ ಘಟನೆಗಳು ಹೆಚ್ಚಾಗಿ ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ್ದವು.
ಈ ವರ್ಷ ಕಣಿವೆಯಲ್ಲಿ ಐದು ಉಗ್ರವಾದ ಘಟನೆಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಹತ್ಯೆಗೀಡಾಗಿದ್ದರೆ ಜಮ್ಮುವಿನಲ್ಲಿ ಆರು ದಾಳಿಗಳಲ್ಲಿ 12 ಭದ್ರತಾ ಸಿಬ್ಬಂದಿಗಳು ಹತರಾಗಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ 2021, 2022 ಮತ್ತು 2023ರಲ್ಲಿ ಕ್ರಮವಾಗಿ 126, 103 ಮತ್ತು 29 ಉಗ್ರವಾದ ಘಟನೆಗಳು ವರದಿಯಾಗಿವೆ.
ಸೋಮವಾರ ದೋಡಾದಲ್ಲಿ ಸಂಭವಿಸಿದ ಎನ್‌ಕೌಂಟರ್ ಕಳೆದ ಮೂರು ವಾರಗಳಲ್ಲಿ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರವಾದಿಗಳ ನಡುವಿನ ಮೂರನೇ ದೊಡ್ಡ ಎನ್‌ಕೌಂಟರ್ ಆಗಿದೆ.
ಸೋಮವಾರದ ಘಟನೆಗೆ ಕಾಶ್ಮೀರ್ ಟೈಗರ್ಸ್ ಎಂಬ ಸಂಘಟನೆ ಹೊಣೆ ಹೊತ್ತುಕೊಂಡಿದೆ.