ಭೂಕುಸಿತ ಪೀಡಿತ ವಯನಾಡ್ ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ

Update: 2024-08-10 08:06 GMT

Photo: X/ANI

ವಯನಾಡ್:  ಪ್ರಧಾನಿ ನರೇಂದ್ರ ಮೋದಿ ಕೇರಳದ ವಯನಾಡ್ ಭೂಕುಸಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಶನಿವಾರ ನಡೆಸಿದರು.

ಕಣ್ಣೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ ಸುಮಾರು 11.15 ಗಂಟೆಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ವಯನಾಡ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಭೂಕುಸಿತದಿಂದ ಭಾರಿ ಹಾನಿಗೀಡಾಗಿರುವ ಚೂರಲ್ ಮಲ, ಮುಂಡಕ್ಕೈ ಹಾಗೂ ಪುಂಚಿರಿಮಟ್ಟಂ ಗುಡ್ಡಗಾಡಿನ ವೈಮಾನಿಕ ಸಮೀಕ್ಷೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ಪ್ರವಾಸೋದ್ಯಮ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಕೂಡಾ ವೈಮಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡರು.

ವೈಮಾನಿಕ ಸಮೀಕ್ಷೆ ಮುಕ್ತಾಯಗೊಂಡ ನಂತರ, ಕಲ್ಪೆಟ್ಟಾದಲ್ಲಿರುವ ಎಸ್ಕೆಸಎಂಜೆ ಹಿರಿಯ ಮಾಧ್ಯಮಿಕ ಶಾಲೆಗೆ ಪ್ರಧಾನಿ ಮೋದಿ ಬಂದಿಳಿಯಲಿದ್ದಾರೆ. ಇದಾದ ನಂತರ ಅವರು ರಸ್ತೆಯ ಮಾರ್ಗವಾಗಿ ಕೆಲವು ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ವಿಪತ್ತು ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕೇರಳ ಸರಕಾರವು ರೂ. 2,000 ಕೋಟಿ ನೆರವನ್ನು ಕೋರಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಕುಸಿತ ಪೀಡಿತ ವಯನಾಡ್ ಗೆ ಭೇಟಿ ನೀಡಿದ್ದಾರೆ.

ಜುಲೈ 30ರಂದು ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಇಲ್ಲಿಯವರೆಗೆ ಕನಿಷ್ಠ ಪಕ್ಷ 226 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News