ಸಂವಾದದ ಮೂಲಕ ಸಂಘರ್ಷ ತಪ್ಪಿಸಿ: ಇಸ್ರೇಲ್-ಹಮಾಸ್‌ಗೆ ಪ್ರಧಾನಿ ಮೋದಿ ಕರೆ

Update: 2023-11-17 06:07 GMT

 ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸಂಭವಿಸುತ್ತಿರುವ ನಾಗರಿಕರ ಸಾವುಗಳನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ, ಸಂವಾದದ ಮೂಲಕ ಸಂಘರ್ಷವನ್ನು ತಪ್ಪಿಸಲು ಕರೆ ನೀಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಹೆಚ್ಚಾಗುತ್ತಿರುವ ಸವಾಲುಗಳನ್ನು ಎದುರಿಸಲು ಜಾಗತಿಕ ದಕ್ಷಿಣ ದೇಶಗಳ ಏಕತೆ ಮತ್ತು ಸಹಕಾರದ ತುರ್ತು ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ.

2ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಸೇರಿದಂತೆ ಹಿಂಸಾಚಾರ ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ನಿಲುವನ್ನು ಒತ್ತಿ ಹೇಳಿದ್ದಾರೆ. ಸಂಘರ್ಷ ಪರಿಹಾರದ ಮೂಲಾಧಾರವಾಗಿ ಸಂಯಮ ಮತ್ತು ಸಂವಾದಕ್ಕೆ ಆದ್ಯತೆ ನೀಡುವ ಮಹತ್ವವನ್ನು ಮೋದಿ ಪ್ರತಿಪಾದಿಸಿದ್ದಾರೆ.

ಪಶ್ಚಿಮ ಏಷ್ಯಾ ಪ್ರದೇಶದ ಘಟನೆಗಳಿಂದ ಹೊಸ ಸವಾಲುಗಳು ಹೊರಹೊಮ್ಮುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

"ನಾವು ಸಹ ಸಂಯಮವನ್ನು ಅನುಸರಿಸಿದ್ದೇವೆ. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ನಾವು ಬಲವಾಗಿ ಖಂಡಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

"ಫೆಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ ನಂತರ, ನಾವು ಫೆಲೆಸ್ತೀನ್ ಜನರಿಗೆ ಮಾನವೀಯ ನೆರವನ್ನು ಕೂಡಾ ಕಳುಹಿಸಿದ್ದೇವೆ. ಜಾಗತಿಕ ದಕ್ಷಿಣದ ದೇಶಗಳು ಹೆಚ್ಚಿನ ಜಾಗತಿಕ ಒಳಿತಿಗಾಗಿ ಒಂದಾಗಬೇಕಾದ ಸಮಯ ಇದು" ಎಂದು ಅವರು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News