ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿ ಹಿಂದೂಗಳ ಭಾವನೆಗಳಿಗೆ ಅಗೌರವ: ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ
ಹೊಸದಿಲ್ಲಿ: ಪವಿತ್ರ ಸಾವನ್ (ಶ್ರಾವಣ) ಮಾಸದಲ್ಲಿ ಮಾಂಸಾಹಾರ ಸೇವಿಸಿ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಪಕ್ಷ ಅಗೌರವ ತೋರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಧಂಪುರದಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ವಿಪಕ್ಷ ನಾಯಕರು ಮಾಂಸಾಹಾರ ಸೇವಿಸುತ್ತಿರುವ ವೈರಲ್ ವೀಡಿಯೋ ಕುರಿತು ಪ್ರತಿಕ್ರಿಯಿಸಿ, “ನೀವು ಯಾರನ್ನು ಅಣಕಿಸಲು ಬಯಸುತ್ತೀರಿ? ನವರಾತ್ರಿಯ ಈ ದಿನಗಳಲ್ಲಿ ಮಾಂಸಾಹಾರ ಸೇವಿಸಿ, ಜನರಿಗೆ ವೀಡಿಯೋ ತೋರಿಸಿ ಅವರ ಭಾವನೆಗಳನ್ನು ನೋವುಂಟು ಮಾಡುತ್ತಿದ್ದೀರಿ. ಈ ಆಟವಾಡಿ ನೀವು ಯಾರನ್ನು ಓಲೈಸಲು ಯತ್ನಿಸುತ್ತಿದ್ದೀರಿ?” ಎಂದು ಪ್ರಧಾನಿ ಪ್ರಶ್ನಿಸಿದರು. “ಈ ದೇಶದ ನಂಬಿಕೆಗಳ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸಲು,” ಜನರು ಮಾಂಸಾಹಾರ ಸೇವಿಸುತ್ತಿರುವ ವೀಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ, ಎಂದು ಅವರು ಹೇಳಿದರು.
ಈಗ ವೈರಲ್ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ಲಾಲು ಯಾದವ್ ಅವರು ಜೊತೆಯಾಗಿ ಮಟನ್ ಖಾದ್ಯ ತಯಾರಿಸುತ್ತಿರುವುದನ್ನು ತೋರಿಸುವ ಸೆಪ್ಟೆಂಬರ್ 2023ರ ವೀಡಿಯೋವನ್ನು ಪ್ರಧಾನಿ ಉಲ್ಲೇಖಿಸುತ್ತಿದ್ದಾರೆಂದು ನಂಬಲಾಗಿದೆ.
ಆದರೆ ಪ್ರಧಾನಿಯ ಹೇಳಿಕೆಗೆ ಹಲವರು ಆಕ್ಷೇಪಿದ್ದು ಆಹಾರ ಆಯ್ಕೆಗಳ ವಿಚಾರ ಮುಂದಿಟ್ಟುಕೊಂಡು ಜನರ ನಡುವೆ ಒಡಕು ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಚಿಕನ್ ತಿನ್ನಲು ನಿಮ್ಮೊಂದಿಗೆ ಸೇರಿಕೊಳ್ಳುತ್ತೇನೆ ಎಂದು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳುತ್ತಿರುವ ವೀಡಿಯೋವನ್ನು ಕೆಲವರು ಎತ್ತಿ ತೋರಿಸಿದ್ದಾರೆ.