ಪ್ರಧಾನಿ ಮೋದಿಯಿಂದ ಉಕ್ರೇನ್‌ಗೆ ‘ಭೀಷ್ಮ ಕ್ಯೂಬ್’ ಉಡುಗೊರೆ

Update: 2024-08-23 11:32 GMT

ನರೇಂದ್ರ ಮೋದಿ , ನರೇಂದ್ರ ಮೋದಿ | PTI 

ಹೊಸದಿಲ್ಲಿ: ಎರಡು ದಿನಗಳ ಪೋಲಂಡ್ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಕ್ರೇನ್ ತಲುಪಿದ್ದಾರೆ. 1991ರಲ್ಲಿ ಉಕ್ರೇನ್ ಸೋವಿಯತ್ ಒಕ್ಕೂಟದಿಂದ ಸ್ವತಂತ್ರಗೊಂಡ ಬಳಿಕ ಇದು ಆ ದೇಶಕ್ಕೆ ಭಾರತೀಯ ಪ್ರಧಾನಿಯೋರ್ವರ ಪ್ರಥಮ ಭೇಟಿಯಾಗಿದೆ.

ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ವ್ಯಾಪಕ ಮಾತುಕತೆಗಳನ್ನು ನಡೆಸಲಿದ್ದಾರೆ.

ತನ್ನ ಭೇಟಿ ಸಂದರ್ಭದಲ್ಲಿ ಮೋದಿ ಉಕ್ರೇನ್‌ಗೆ ವಿಪತ್ತು ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಪ್ರತಿಕ್ರಿಯೆಗಾಗಿ ರೂಪಿಸಲಾದ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ ‘ಭೀಷ್ಮ ಕ್ಯೂಬ್’ನ್ನು ಉಡುಗೊರೆಯಾಗಿ ನೀಡಲಿದ್ದಾರೆ.

‘ಭೀಷ್ಮ ಕ್ಯೂಬ್’ ಸಹಯೋಗ, ಹಿತ ಮತ್ತು ಮೈತ್ರಿಗಾಗಿ ಭಾರತ ಆರೋಗ್ಯ ಉಪಕ್ರಮ ‘ಪ್ರಾಜೆಕ್ಟ್ ಭೀಷ್ಮ್’ ಅಡಿ ಅಭಿವೃದ್ಧಿಗೊಳಿಸಲಾದ ಆಧುನಿಕ ಸಂಚಾರಿ ಆಸ್ಪತ್ರೆ ಘಟಕವಾಗಿದೆ. ಫೆ.2022ರಲ್ಲಿ ಪ್ರಕಟಿಸಲಾದ ಈ ಯೋಜನೆಯು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಕ್ಷಿಪ್ರ ವೈದ್ಯಕೀಯ ನೆರವು ಒದಗಿಸುವಲ್ಲಿ ಭಾರತದ ಬದ್ಧತೆ ಮತ್ತು ಜಾಗತಿಕ ಮಾನವೀಯ ಪ್ರಯತ್ನಗಳಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಭೀಷ್ಮ ಕ್ಯೂಬ್ ಆಧುನಿಕ ವೈದ್ಯಕೀಯ ಇಂಜಿನಿಯರಿಂಗ್‌ನ ಅದ್ಭುತವಾಗಿದ್ದು, ಕ್ಷಿಪ್ರ ಪ್ರತಿಕ್ರಿಯೆ ಮತ್ತು ಸಮಗ್ರ ಆರೈಕೆಯನ್ನು ಕೇಂದ್ರೀಕರಿಸಿ 200 ಗಾಯಾಳುಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅದನ್ನು ರೂಪಿಸಲಾಗಿದೆ. 720 ಕೆ.ಜಿ.ಗಳಷ್ಟು ತೂಗುವ ಘಟಕವು ಸುಲಭವಾಗಿ ಸಾಗಿಸಬಹುದಾದ 72 ಬಿಡಿಭಾಗಗಳನ್ನು ಹೊಂದಿದೆ.

ಈ ಬಿಡಿಭಾಗಗಳನ್ನು ಕೈಯಲ್ಲಿ, ಸೈಕಲ್ ಅಥವಾ ಡ್ರೋನ್ ಮೂಲಕ ಸಾಗಿಸಬಹುದಾಗಿದ್ದು, ಎಲ್ಲಿ ಬೇಕಾದರೂ ಸುಲಭವಾಗಿ ಘಟಕವನ್ನು ನಿಯೋಜಿಸಬಹುದು. ಕ್ಯೂಬ್‌ನ ನವೀನ ವಿನ್ಯಾಸದಿಂದಾಗಿ ಅದನ್ನು ನಿಯೋಜಿಸಿದ ಕೇವಲ 12 ನಿಮಿಷಗಳಲ್ಲಿ ಕಾರ್ಯಾರಂಭವನ್ನು ಮಾಡುತ್ತದೆ ಮತ್ತು ಇದು ಪ್ರತಿಯೊಂದು ಸೆಕೆಂಡ್ ಕೂಡ ಮುಖ್ಯವಾಗಿರುವ ತುರ್ತು ಸಂದರ್ಭಗಳಲ್ಲಿ ನಿರ್ಣಾಯಕ ವೈಶಿಷ್ಟ್ಯವಾಗಿದೆ. ಆಪರೇಷನ್ ಥಿಯೇಟರ್,ಕ್ಷ-ಕಿರಣ ಯಂತ್ರಗಳು, ವೆಂಟಿಲೇಟರ್‌ಗಳು ಮತ್ತು ವಿವಿಧ ಗಾಯಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳು ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಅನುಕೂಲಗಳನ್ನು ಹೊಂದಿರುವ ಭೀಷ್ಮ ಕ್ಯೂಬ್ ವಿಪತ್ತು ನಿರ್ವಹಣೆಯಲ್ಲಿ ಸಮಗ್ರ ಪರಿಹಾರವಾಗಿದೆ. ದೃಢವಾದ, ಜಲನಿರೋಧಕ ವಿನ್ಯಾಸವು ವೈವಿಧ್ಯಮಯ ಪರಿಸರಗಳಲ್ಲಿ ಅದರ ಬಾಳಿಕೆಯನ್ನು ಖಚಿತಪಡಿಸುತ್ತದೆ ಮತ್ತು ಏರ್‌ಡ್ರಾಪ್‌ಗಳಿಂದ ಭೂ ಸಾರಿಗೆಯವರೆಗೆ ವ್ಯಾಪಕ ಶ್ರೇಣಿಯ ತುರ್ತು ಪರಿಸ್ಥಿತಿಗಳಿಗೆ ಸೂಕ್ತವಾಗಿಸಿದೆ.

ಭೀಷ್ಮ ಕ್ಯೂಬ್ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ಅನಾಲಿಟಿಕ್ಸ್ ಅನ್ನು ಸಂಯೋಜಿಸುತ್ತದೆ,ತನ್ಮೂಲಕ ನೈಜ ಸಮಯದ ಮೇಲ್ವಿಚಾರಣೆ, ಪರಿಣಾಮಕಾರಿ ಸಮನ್ವಯ ಮತ್ತು ಕ್ಷೇತ್ರದಲ್ಲಿ ವೈದ್ಯಕೀಯ ಸೇವೆಗಳ ಸಮರ್ಥ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ.

ಪ್ರತಿ ಘಟಕಕ್ಕೆ 1.50 ಕೋಟಿ ರೂ.ಮೌಲ್ಯವನ್ನು ಹೊಂದಿರುವ ಭೀಷ್ಮ ಕ್ಯೂಬ್ ಸೌರಶಕ್ತಿ ಮತ್ತು ಬ್ಯಾಟರಿ ಚಾಲಿತವಾಗಿದ್ದು,ಸುಸ್ಥಿರತೆ ಮತ್ತು ಕಾರ್ಯಾಚರಣೆಯ ದಕ್ಷತೆಗಾಗಿ ವಿನ್ಯಾಸಗೊಂಡಿದೆ.

ಯೋಜನೆಯು ಪ್ರಧಾನಿ ಮೋದಿಯವರು ಜನವರಿ 2023ರ ಗ್ಲೋಬಲ್ ಸೌಥ್ ಶೃಂಗಸಭೆಯಲ್ಲಿ ಪ್ರಕಟಿಸಿದ್ದ ಭಾರತದ ವಿಶಾಲವಾದ ‘ಆರೋಗ್ಯ ಮೈತ್ರಿ’ ಉಪಕ್ರಮಕ್ಕೆ ಅನುಗುಣವಾಗಿದೆ. ಈ ಉಪಕ್ರಮದಡಿ ಭಾರತವು ನೈಸರ್ಗಿಕ ಪ್ರಕೋಪ ಅಥವಾ ಮಾನವೀಯ ಬಿಕ್ಕಟ್ಟುಗಳಿಂದ ಪೀಡಿತ ಯಾವುದೇ ಅಭಿವೃದ್ಧಿಶೀಲ ದೇಶಕ್ಕೆ ಅಗತ್ಯ ವೈದ್ಯಕೀಯ ಪೂರೈಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭೀಷ್ಮ ಕ್ಯೂಬ್‌ನ ಉಪಯುಕ್ತತೆಯನ್ನು ಪ್ರದರ್ಶಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News