ಪ್ರಧಾನಿ ಮೋದಿ ಹೇಡಿ, ಅವರು ಮಣಿಪುರ ಕುರಿತು ಸಂಸತ್ತನ್ನು ಎದುರಿಸಲು ಹೆದರುತ್ತಿದ್ದಾರೆ: ರಾಮಚಂದ್ರ ಗುಹಾ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತನ್ನು ಎದುರಿಸಲು ಹೆದರುತ್ತಿರುವ ಹೇಡಿ ಎಂದು ಇತಿಹಾಸಕಾರ ಮತ್ತು ರಾಜಕೀಯ ವಿಮರ್ಶಕ ರಾಮಚಂದ್ರ ಗುಹಾ ಹೇಳಿದ್ದಾರೆ. ಪ್ರಧಾನಿಯಾಗಿ ಮೋದಿ ಸಂಸತ್ತಿಗೆ ಉತ್ತರದಾಯಿಯಾಗಿದ್ದಾರೆ ಎಂದಿರುವ ಗುಹಾ, ಗಂಭೀರ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಇದು ಪ್ರಧಾನ ಮಂತ್ರಿಯ ವೈಫಲ್ಯವನ್ನು ಸೂಚಿಸುತ್ತಿದೆ ಎಂದು ಹೇಳಿದ್ದಾರೆ. ಮೋದಿಯವರು ತನ್ನದೇ ಆದ ಗಾಳಿಯ ಗುಳ್ಳೆಯಲ್ಲಿ ಬದುಕಿದ್ದಾರೆ ಮತ್ತು ತಾನದನ್ನು ಸವಾರಿ ಮಾಡಬಹುದು ಎಂದು ಆಶಿಸುತ್ತಿದ್ದಾರೆ ಎಂದೂ ಗುಹಾ ಸುದ್ದಿ ಜಾಲತಾಣ ‘thewire.in’ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ 35 ನಿಮಿಷಗಳ ಸಂದರ್ಶನದಲ್ಲಿ ಹೇಳಿದರು.
ಸಂದರ್ಶನವು ಗುಹಾ ಇತ್ತೀಚಿಗೆ ‘ದಿ ಟೆಲಿಗ್ರಾಫ್’ ದೈನಿಕದಲ್ಲಿ ಬರೆದಿದ್ದ ಲೇಖನವನ್ನು ಆಧರಿಸಿದ್ದು, ಅವರು ಲೇಖನದಲ್ಲಿಯ ತನ್ನ ವಾದಗಳನ್ನು ಇಲ್ಲಿ ಮುಂದುವರಿಸಿದರು.
ಪ್ರಧಾನಿಯವರು ಈಗ ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರನ್ನು ವಜಾಗೊಳಿಸಿದರೆ ತನ್ನಲ್ಲಿ ‘ನೈತಿಕ ಬೆಳವಣಿಗೆ ’ ಮತ್ತು ‘ಸುಧಾರಣೆ’ಯಾಗಿದೆ ಎನ್ನುವುದನ್ನು ಮೋದಿ ತೋರಿಸಿದಂತಾಗುತ್ತದೆ ಮತ್ತು 2002ರಲ್ಲಿ ತಾನು ಗುಜರಾತ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ್ದ ದಂಗೆಗಳನ್ನು ನಿಯಂತ್ರಿಸುವಲ್ಲಿ ತನ್ನ ವೈಫಲ್ಯಕ್ಕಾಗಿ ಕೊಂಚ ಪ್ರಾಯಶ್ಚಿತ್ತ ಪಟ್ಟಂತೆಯೂ ಆಗುತ್ತದೆ ಎಂದು ಗುಹಾ ಹೇಳಿದರು.
ಸಂಸತ್ತನ್ನು ಉದ್ದೇಶಿಸಿ ಮಾತನಾಡುವಲ್ಲಿ ಮೋದಿಯವರ ವೈಫಲ್ಯದ ಬಗ್ಗೆ ವಿವರಿಸಿದ ಗುಹಾ, ಅವರನ್ನು ರಾಜನಾಥ ಸಿಂಗ್ ಮತ್ತು ಅಮಿತ್ ಶಾ ರಕ್ಷಿಸುತ್ತಿದ್ದಾರೆ. ಅವರಿಬ್ಬರೂ ಮೋದಿಯವರನ್ನು ರಕ್ಷಿಸಲು,ಅವರನ್ನು ಸಮಾಧಾನಿಸಲು,ಅವರ ಮರ್ಜಿ ಕಾಯಲು ಮತ್ತು ಅವರನ್ನು ಚರ್ಚೆಗೆ ಒಡ್ಡದಿರಲು ಬಯಸಿದ್ದಾರೆ ಎಂದರು.
ಈ ಸಂಬಂಧ ಗುಹಾ,ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರ ಪಕ್ಷಪಾತದ ವರ್ತನೆಯು ಆಘಾತಕಾರಿಯಾಗಿದೆ ಎಂದೂ ಹೇಳಿದರು.
ಮಣಿಪುರದಲ್ಲಿ ಇಂದು ಸಂಭವಿಸುತ್ತಿರುವುದು ಹಾಗೂ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯ ಭಾರತೀಯ ಗಣರಾಜ್ಯ, ಭಾರತೀಯ ಪ್ರಜಾಪ್ರಭುತ್ವ ಮತ್ತು ನಮ್ಮ ದೇಶ ಹಾಗೂ ಅದರ ಪ್ರಜೆಗಳ ಭವಿಷ್ಯಕ್ಕೆ ಹಾನಿಯನ್ನುಂಟು ಮಾಡಿದೆ ಎಂದ ಗುಹಾ,ಮಣಿಪುರವು ಅರಾಜಕತೆ ಮತ್ತು ಅಂತರ್ಯುದ್ಧದ ಮಿಶ್ರಣವಾಗಿದೆ ಎಂದು ಹೇಳಿದರು.
ಸಂದರ್ಶನದಲ್ಲಿ,ಮಣಿಪುರವು ಇತರ ರಾಜ್ಯಗಳಲ್ಲಿಯ ಹಿಂದಿನ ಅಂತರ್ ಕೋಮು ಸಂಘರ್ಷಗಳಿಗಿಂತ ಹೇಗೆ ಭಿನ್ನವಾಗಿದೆ ಎನ್ನುವುದರ ಕುರಿತು ಮಾತನಾಡಿದ ಗುಹಾ,ಇಂದು ಮಣಿಪುರದಲ್ಲಿಯ ಸ್ಥಿತಿಯು 1980ರ ದಶಕದಲ್ಲಿ ಪಂಜಾಬ,1990ರ ದಶಕದಲ್ಲಿ ಜಮ್ಮು-ಕಾಶ್ಮೀರ ಮತ್ತು 2000ರ ದಶಕದಲ್ಲಿ ಗುಜರಾತ್ ಎದುರಿಸಿದ್ದ ಸ್ಥಿತಿಗಿಂತ ಹೆಚ್ಚು ಗಂಭೀರವಾಗಿದೆ ಎಂದೂ ಬೆಟ್ಟು ಮಾಡಿದರು.