ಪ್ರಧಾನಿ ಮೋದಿ ಶ್ರೀಮಂತ ಉದ್ಯಮಿಗಳ ಕೈಗೊಂಬೆ : ರಾಹುಲ್ ಗಾಂಧಿ

Update: 2024-04-16 15:40 GMT

ರಾಹುಲ್ ಗಾಂಧಿ | PC : PTI 

ಕೋಝಿಕ್ಕೋಡ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ರಾಹುಲ್ ಗಾಂಧಿ, ಮೋದಿ ದೇಶದ ಕೆಲವು ಉದ್ಯಮಿಗಳ ಕೈಬೊಂಬೆ ಎಂದು ಕರೆದಿದ್ದಾರೆ.

ಕೇರಳದ ವಯನಾಡಿನ ಕೊಡಿಯತ್ತೂರಿನಲ್ಲಿ ತಮ್ಮ ರೋಡ್ ಶೋ ವೇಳೆ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆ ಸೆಳೆಯುವುದು, ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವುದು ಹಾಗೂ ಅವರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದು ಮೋದಿಯ ಕೆಲಸವಾಗಿದೆ ಎಂದು ಅವರು ಹೇಳಿದರು.

ಮೋದಿ ಅವರು ದೇಶದ 20-25 ಜನರಿಗೆ ಸುಮಾರು 16 ಲಕ್ಷ ಕೋಟಿ ರೂ. ನೀಡಿದ್ದಾರೆ. ಅವರು ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ನಿರುದ್ಯೋಗ ಅಥವಾ ಬೆಲೆ ಏರಿಕೆಯ ಕುರಿತು ಮಾತನಾಡುತ್ತಿಲ್ಲ ಎಂದು ಅವರು ತಿಳಿಸಿದರು.

ಚುನಾವಣಾ ಬಾಂಡ್ ಗಳ ಬಗ್ಗೆ ಅವರು ಚುನಾವಣಾ ಬಾಂಡ್ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸುಲಿಗೆಯ ಒಂದು ರೂಪವಾಗಿದೆ ಎಂದರು.

ಸಂವಿಧಾನವನ್ನು ನಾಶಪಡಿಸಲು ಹಾಗೂ ಬದಲಾಯಿಸಲು ಬಿಜೆಪಿ ಹಾಗೂ ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಇದು 2024ರ ಲೋಕಸಭಾ ಚುನಾವಣೆಯ ಅತೀ ದೊಡ್ಡ ವಿಷಯ. ಇತರ ಎಲ್ಲಾ ವಿಷಯಗಳು ಇದರಿಂದಲೇ ಉದ್ಭವವಾಗಿವೆ ಎಂದರು.

ಅಗ್ನಿಪಥ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ರೂಪಿಸಲಾಗಿದೆ ಹಾಗೂ ಶಸಸ್ತ್ರ ಪಡೆಗಳ ಮೇಲೆ ಹೇರಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಆಡಳಿತ ಅಸ್ತಿತ್ವಕ್ಕೆ ಬಂದ ಕೂಡಲೇ, ಅಗ್ನಿಪಥ್ ಸೇನಾ ಯೋಜನೆಯನ್ನು ರದ್ದುಗೊಳಿಸಲಾಗುವುದು ಹಾಗೂ ಹಳೆಯ ಶಾಶ್ವತ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಚಾಲ್ತಿಗೆ ತರಲಾಗುವುದು ಎಂದರು.

‘ಎಕ್ಸ್’ನ ಪೋಸ್ಟ್ ನಲ್ಲಿ ಅವರು, ‘‘ಅಗ್ನಿಪಥ್ ಯೋಜನೆ ಭಾರತೀಯ ಸೇನೆ ಹಾಗೂ ದೇಶವನ್ನು ರಕ್ಷಿಸುವ ಕನಸು ಕಾಣುತ್ತಿರುವ ಕೆಚ್ಚೆದೆಯ ಯುವಕರಿಗೆ ಅವಮಾನ’’ ಎಂದಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News