ʼಮನ್ ಕಿ ಬಾತ್ʼ ನಲ್ಲಿ ಚಾಮರಾಜನಗರದ ಮಹಿಳೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Update: 2023-11-26 18:42 GMT

ನರೇಂದ್ರ ಮೋದಿ | Photo: NDTV 

ಹೊಸದಿಲ್ಲಿ: 26/11 ಮುಂಬೈ ಭಯೋತ್ಪಾದನಾ ದಾಳಿಯ 15ನೇ ವರ್ಷವಾದ ರವಿವಾರ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತ ಅತ್ಯಂತ ಘೋರ ದಾಳಿಯನ್ನು ಎದುರಿಸಿದೆ. ಆದರೆ, ಈ ದಾಳಿಯಿಂದ ಚೇತರಿಸಿಕೊಂಡಿದೆ. ಅಲ್ಲದೆ, ಅದು ಭಯೋತ್ಪಾದನೆಯನ್ನು ಧೈರ್ಯದಿಂದ ಹತ್ತಿಕ್ಕಿದೆ ಎಂದು ಹೇಳಿದ್ದಾರೆ.

ಮನ್ ಕಿ ಬಾತ್‌ನ 107ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮೋದಿ ಅವರು ಮುಂಬೈ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭ ಅವರು ತ್ಯಾಜ್ಯದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದ ಮಹಿಳೆಯ ಕಾರ್ಯವನ್ನು ಶ್ಲಾಘಿಸಿದರು. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ವರ್ಷಾ ಅವರ ಕರಕುಶಲ ಕಲೆ ಬಗ್ಗೆ ಪ್ರಸ್ತಾಪಿಸಿದ ಮೋದಿ ವೋಕಲ್ ಫಾರ್ ಲೋಕಲ್‌ನ ಮಹತ್ವ ಸಾರಿದರು.

ಮನ್ ಕಿ ಬಾತ್‌ನಿಂದ ಪ್ರೇರೇಪಿತವಾಗಿರುವ ವರ್ಷಾ, ಬಾಳೆ ಗಿಡದ ನಾರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಉದ್ಯಮ ನಡೆಸುತ್ತಿದ್ದಾರೆ. ಬಾಳೆ ದಿಂಡಿನಿಂದ ಉಪ್ಪಿನಕಾಯಿ, ಚಟ್ನಿಪುಡಿ ಸೇರಿದಂತೆ ವಿವಿಧ ತಿನಿಸುಗಳನ್ನೂ ತಯಾರಿಸುವುದರೊಂದಿಗೆ ಐವರು ಮಹಿಳೆಯರು, ಇಬ್ಬರು ಪುರುಷರಿಗೆ ಕೆಲಸ ನೀಡಿದ್ದಾರೆ. ವೋಕಲ್ ಫಾರ್ ಲೋಕಲ್‌ನಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವರ್ಷಾ, “ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ನಾನು ಮಾಡುವ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುತಿಸಿ ಪ್ರಸ್ತಾಪಿಸಿದ್ದು ಹೆಮ್ಮೆ ಎನಿಸುತ್ತದೆ. ನಾನು ಎಂ.ಟೆಕ್ ಪದವೀಧರಳಾಗಿದ್ದು, ಮನ್ ಕಿ ಬಾತ್‌ನಿಂದ ಪ್ರೇರಣೆ ಪಡೆದು ಬಾಳೆ ನಾರು ಹಾಗೂ ದಿಂಡಿನಿಂದ ವಿವಿಧ ವಸ್ತುಗಳನ್ನು ತಯಾರಿಸಲು ಆರಂಭಿಸಿದೆ. ಮೇಳಗಳು, ಆನ್‌ಲೈನ್ ಮಳಿಗೆ, ಸಾವಯವ ಮಳಿಗೆಗಳಲ್ಲಿ ನಮ್ಮ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು” ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News