ಪಶ್ಚಿಮ ಏಷ್ಯಾದ ಸ್ಥಿತಿಗತಿ ಬಗ್ಗೆ ಪ್ರಧಾನಿ ಮೋದಿ, ಸೌದಿ ಯುವರಾಜ ಮಾತುಕತೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಸೌದಿ ಯುವರಾಜ ಮತ್ತು ಪ್ರಧಾನಿ ಮುಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ಅಝೀಝ್ ಅಲ್ ಸೌದ್ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಈ ವೇಳೆ ದ್ವಿಪಕ್ಷೀಯ ಸಂಬಂಧ ಮತ್ತು ಪಶ್ಚಿಮ ಏಷ್ಯಾದ ಸ್ಥಿತಿಗತಿ ಬಗ್ಗೆ ಚರ್ಚಿಸಿದ ಉಭಯ ದೇಶಗಳ ಮುಖಂಡರು, ಭಯೋತ್ಪಾದನೆ, ಹಿಂಸೆ ಮತ್ತು ನಾಗರಿಕ ಸಾವು ನೋವುಗಳ ಬಗ್ಗೆ ಅಪಾರ ಕಳವಳವನ್ನು ವ್ಯಕ್ತಪಡಿಸಿದರು.
ಇಸ್ರೇಲ್-ಫೆಲಸ್ತೀನ್ ವಿಷಯದಲ್ಲಿ ಸಂತ್ರಸ್ತ ಜನತೆಗೆ ಮಾನವೀಯ ನೆರವನ್ನು ಮುಂದುವರಿಸಬೇಕು ಎಂಬ ತನ್ನ ಸುಧೀರ್ಘ ಮತ್ತು ತತ್ವಾಧರಿತ ನಿಲುವನ್ನು ಪುನರುಚ್ಚರಿಸಿದ್ದಾಗಿ ಭಾರತ ಸರ್ಕಾರ ಪ್ರಕಟಿಸಿದೆ.
ಈ ಭಾಗದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಗಾಗಿ ಜತೆಯಾಗಿ ಕಾರ್ಯನಿರ್ವಹಿಸಲು ಉಭಯ ಮುಖಂಡರು ಒಪ್ಪಿಕೊಂಡಿದ್ದಾರೆ. ಕೆಂಪು ಸಮುದ್ರ ವಿಚಾರದಲ್ಲಿ ಸಂಘರ್ಷ, ಸಾಗರ ಭದ್ರತೆಯನ್ನು ನಿರ್ವಹಿಸಲು ಒತ್ತುನೀಡುವುದು ಮತ್ತು ಮುಕ್ತ ಜಲಮಾರ್ಗದಂತಹ ವಿಚಾರಗಳ ಬಗ್ಗೆಯೂ ಉಭಯ ಮುಖಂಡರು ಚರ್ಚಿಸಿದ್ದಾಗಿ ಅಧಿಕೃತ ಪ್ರಕಟನೆ ತಿಳಿಸಿದೆ.
ಇದಕ್ಕೂ ಮುನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸಾಗರ ಭದ್ರತೆಗೆ ತಂದೊಡ್ಡಿದ ಅಪಾಯದ ಬಗ್ಗೆಯೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಪ್ರಧಾನಿ ಚರ್ಚಿಸಿದ್ದರು.
ಸೌದಿ ಯುವರಾಜ 2023ರ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಮಾಡಿಕೊಂಡಿದ್ದ ದ್ವಿಪಕ್ಷೀಯ ಪ್ರಮುಖ ಪಾಲುದಾರಿಕೆ ಪ್ರಗತಿಯ ಬಗ್ಗೆಯೂ ಚರ್ಚೆ ನಡೆದಿದೆ.