ಪ್ರಧಾನಿ ಮೋದಿ ‘ಅಸತ್ಯಮೇವ ಜಯತೇ’ಯ ಸಂಕೇತ : ಕಾಂಗ್ರೆಸ್

Update: 2024-04-25 15:29 GMT

 ಜೈರಾಮ್ ರಮೇಶ್ | PC : PTI 

ಹೊಸದಿಲ್ಲಿ : ಲೋಕಸಭಾ ಚುನಾವಣೆಗಳಲ್ಲಿ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಗುರುವಾರ ಆರೋಪಿಸಿರುವ ಕಾಂಗ್ರೆಸ್, ಪಕ್ಷದ ಪ್ರಣಾಳಿಕೆಯಲ್ಲಿ ‘ಸಂಪತ್ತಿನ ಮರುಹಂಚಿಕೆ’ಯನ್ನು ಎಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದನ್ನು ತೋರಿಸುವಂತೆ ಅವರಿಗೆ ಸವಾಲು ಹಾಕಿದೆ.

ಇಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಮೋದಿ ‘ಅಸತ್ಯಮೇವ ಜಯತೇ’ಯ ಸಂಕೇತವಾಗಿದ್ದಾರೆ ಎಂದು ಪ್ರತಿಪಾದಿಸಿದರು. ಬಿಜೆಪಿ ಸಿದ್ಧಪಡಿಸಿದ ಪಿಚ್ನಲ್ಲಿ ಕಾಂಗ್ರೆಸ್ ಆಟವಾಡುವುದಿಲ್ಲ, ಅದು ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆಗಳನ್ನು ಮುಖ್ಯವಾಗಿಸಿಕೊಂಡು ಹೋರಾಡುತ್ತದೆ ಎಂದರು.

ಲೋಕಸಭಾ ಚುನಾವಣೆಯ ಮೊದಲ ಹಂತದ ಟ್ರೆಂಡ್ಗಳು ಕೆಲವು ರಾಜ್ಯಗಳಲ್ಲಿ ಬಿಜೆಪಿ ‘ಅಳಿಸಿ ಹೋಗಿದೆ ’ಎನ್ನುವುದನ್ನು ತೋರಿಸುತ್ತಿವೆ ಮತ್ತು ಕೆಲವು ರಾಜ್ಯಗಳಲ್ಲಿ 2019ರ ಚುನಾವಣೆಗಳಿಗೆ ಹೋಲಿಸಿದರೆ ಅದರ ಸ್ಥಾನಗಳು ಕಡಿಮೆಯಾಗುತ್ತಿವೆ ಎಂದು ರಮೇಶ್ ಹೇಳಿದರು.

‘‘ಅವರು (ಪ್ರಧಾನಿ ಮೋದಿ) ಅಜೆಂಡಾವನ್ನು ಇನ್ನೊಂದು ದಿಕ್ಕಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಅವರು ಮೊದಲು ನಮ್ಮ ಪ್ರಣಾಳಿಕೆಗೆ ಕೋಮು ಬಣ್ಣವನ್ನು ನೀಡಲು ಪ್ರಯತ್ನಿಸಿದ್ದರು ಮತ್ತು ಬಳಿಕ ‘ನ್ಯಾಯ ಪತ್ರ’ದಲ್ಲಿ ಇಲ್ಲದ ವಿಷಯಗಳ ಬಗ್ಗೆ ಮಾತನಾಡಿದ್ದರು. ಇದು ಸುಳ್ಳುಗಳನ್ನು ಆಧರಿಸಿರುವ ಪ್ರಚಾರವಾಗಿದೆ ’’ ಎಂದು ಕಿಡಿಕಾರಿದ ರಮೇಶ್,‘ತಪ್ಪು ಪ್ರಚಾರವಾಗಿದ್ದರೂ ಅವರು ನಮ್ಮ ಪ್ರಣಾಳಿಕೆಗೆ ಪ್ರಚಾರ ನೀಡುತ್ತಿದ್ದಾರೆ ’ ಎಂದರು.

ಭಾರತ ಜೋಡೊ ಯಾತ್ರೆ ಮತ್ತು ಭಾರತ ಜೋಡೊ ನ್ಯಾಯ ಯಾತ್ರೆ ಸಂದರ್ಭದಲ್ಲಿ ಜನರಿಂದ ಲಭ್ಯವಾದ ಮರುಮಾಹಿತಿಗಳ ಆಧಾರದಲ್ಲಿ ನ್ಯಾಯ ಪತ್ರವನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ನಿರುದ್ಯೋಗ ಹೆಚ್ಚಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲಾಗುತ್ತಿಲ್ಲ ಮತ್ತು ಆರ್ಥಿಕ ಅಸಮಾನತೆಗಳು ಹೆಚ್ಚಾಗಿವೆ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ ಎಂದರು.

ಕಾಂಗ್ರೆಸ್ ಪಕ್ಷವು ನಾರಿ ನ್ಯಾಯ್, ಯುವ ನ್ಯಾಯ್, ಕಿಸಾನ್ ನ್ಯಾಯ್, ಶ್ರಮಿಕ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ಗಳನ್ನು ಮುಖ್ಯವಾಗಿಟ್ಟುಕೊಂಡು ಚುನಾವಣೆಯಲ್ಲಿ ಹೋರಾಡಲಿದೆ ಎಂದು ಪ್ರತಿಪಾದಿಸಿದ ರಮೇಶ್,‘ನಮ್ಮದು ಧನಾತ್ಮಕ ಅಜೆಂಡಾ ಆಗಿದೆ. ನಿರುದ್ಯೋಗ,ಬೆಲೆ ಏರಿಕೆ,ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿಯಂತಹ ಜನರ ಸಮಸ್ಯೆಗಳ ಮೇಲೆ ಚುನಾವಣೆಯಲ್ಲಿ ಹೋರಾಡಲು ನಾವು ಬಯಸುತ್ತೇವೆ ’ ಎಂದರು.

ಮೋದಿ ‘400 ಪಾರ್’ ಮತ್ತು ‘ಮೋದಿ ಕಿ ಗ್ಯಾರಂಟಿ’ ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸಿದ್ದಾರೆ ಮತ್ತು ಧ್ರುವೀಕರಣದ ಹೊಸ ಭಾಷೆಯನ್ನು ಬಳಸುತ್ತಿದ್ದಾರೆ ಎಂದ ಅವರು, ಧ್ರುವೀಕರಣವು ಸದಾ ಮೋದಿಯವರ ಅಸ್ತ್ರವಾಗಿದೆ. ಆದರೆ ಅವರು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಧ್ರುವೀಕರಣದ ಭಾಷೆಯನ್ನು ಹೆಚ್ಚು ನಿರ್ಲಜ್ಜವಾಗಿ ಬಳಸುತ್ತಿದ್ದಾರೆ. ಅವರು ಕೇವಲ ಕಾಂಗ್ರೆಸ್ನ ‘ನ್ಯಾಯ ಪತ್ರ’ದ ಹೆಸರು ಕೆಡಿಸಲು ಬಯಸಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News