ಪ್ರಧಾನಿ ಅಭಿವೃದ್ಧಿ ವಿಷಯಗಳ ಕುರಿತು ಮಾತನಾಡಬೇಕು : ಖರ್ಗೆ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಪ್ರಚಾರ ಭಾಷಣದಲ್ಲಿ ಇತರ ವಿಷಯಗಳಿಗೆ ಬದಲಾಗಿ ದೇಶದ ಅಭಿವೃದ್ಧಿ ಕುರಿತು ಮಾತನಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.
ಮೋದಿ ಅವರು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ, ತಾವು ಹಿಂದೂ-ಮುಸ್ಲಿಂ ವಿಚಾರವಾಗಿ ರಾಜಕಾರಣ ಮಾಡಲು ಆರಂಭಿಸಿದ್ದರೆ, ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ಅರ್ಹರಲ್ಲ ಎಂದು ಹೇಳಿಕೆ ನೀಡಿದ ಬಳಿಕ ಖರ್ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರೊಂದಿಗೆ ಇಲ್ಲಿ ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಖರ್ಗೆ, ‘‘ಮೋದಿ ಅವರು ಕಳೆದ 10 ವರ್ಷಗಳಲ್ಲಿ ಮಾಡಿರುವ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಿಲ್ಲ ಯಾಕೆ ?’’ ಎಂದು ಪ್ರಶ್ನಿಸಿದರು.
ಹಿಂದೂ-ಮುಸ್ಲಿಮರ ನಡುವೆ ಎಂದಿಗೂ ತಾರತಮ್ಯ ಎಸಗಿಲ್ಲ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘‘ಮೋದಿ ಅವರು ಗೋಮಾಂಸ, ಮಟನ್, ಚಿಕನ್, ಮೀನು ಹಾಗೂ ಮಂಗಳಸೂತ್ರದ ಬಗ್ಗೆ ಹೇಳಿಲ್ಲವೇ ? ಈ ಪದಗಳನ್ನು ಪ್ರಧಾನಿ ಅವರು ಬಳಸಿದ್ದಾರೆಯೋ ಹೊರತು ನಾವಲ್ಲ” ಎಂದರು.
‘‘ಈ ಎಲ್ಲಾ ವಿಚಾರಗಳನ್ನು ಬಿಡಿ. ನೀವು ಮಾಡಿದ ಕೆಲಸಗಳ ಬಗ್ಗೆ ಜನರಿಗೆ ಹೇಳಿ. ಅವುಗಳ ಆಧಾರದಲ್ಲಿ ಮತ ಕೇಳಿ ಎಂದು ನಾವು ಹೇಳುತ್ತಿದ್ದೇವೆ’’ ಎಂದು ಅವರು ತಿಳಿಸಿದರು.
ದೇಶಲ್ಲಿ ನಾಲ್ಕು ಹಂತಗಳ ಮತದಾನ ಪೂರ್ಣಗೊಂಡಿದೆ. ಇಂಡಿಯಾ ಮೈತ್ರಿಕೂಟ ಅತ್ಯಂತ ಬಲಿಷ್ಠವಾಗಿದೆ. ದೇಶದ ಜನರು ಪ್ರಧಾನಿಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಎಂದು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ಇಂಡಿಯಾ ಮೈತ್ರಿಕೂಟ ಜೂನ್ 4ರಂದು ನೂತನ ಸರಕಾರ ರಚಿಸಲಿದೆ ಎಂದು ಖರ್ಗೆ ಹೇಳಿದರು.
‘ಈ ಜನರು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್ ನಾಯಕ ಮೋಹನ್ ಭಾಗವತ್ ಇದನ್ನು ಮೊದಲೇ ಹೇಳಿದ್ದಾರೆ. ಸಂವಿಧಾನ ಬದಲಾಯಿಸಲು ಮೂರನೇ ಎರಡು ಬಹುಮತ ಬೇಕು ಎಂದು ಕರ್ನಾಟಕದಲ್ಲಿ ಹೇಳಲಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಯ ಹಲವರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡಿದ್ದಾರೆ’’ ಎಂದು ಅವರು ಹೇಳಿದರು.
‘‘ಇಂಡಿಯಾ ಮೈತ್ರಿಕೂಟ ಉತ್ತರಪ್ರದೇಶದಲ್ಲಿ 79 ಸ್ಥಾನಗಳನ್ನು ಪಡೆಯಲಿದೆ. ಕ್ಯೋಟೊ (ಜಪಾನ್‌ನ ಸುಂದರ ನಗರ. ವಾರಣಾಸಿ ನಗರವನ್ನು ಕ್ಯೋಟೊದಂತೆ ಅಭಿವೃದ್ಧಿಗೊಳಿಸಲಾಗುವುದು ಎಂದು ಬಿಜೆಪಿ ಈ ಹಿಂದೆ ಹೇಳಿತ್ತು) ಕ್ಷೇತ್ರದಲ್ಲಿ ಮಾತ್ರ ಪೈಪೋಟಿ ಇದೆ’’ ಎಂದು ಪ್ರಧಾನಿ ಅವರ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಉಲ್ಲೇಖಿಸಿ ಎಸ್‌ಪಿಯ ವರಿಷ್ಠ ಅಖಿಲೇಶ್ ಯಾದವ್ ಅವರು ಹೇಳಿದರು.