ಸಿಇಸಿ, ಇಸಿ ನೇಮಕಾತಿ ಮಸೂದೆಗೆ ರಾಷ್ಟ್ರಪತಿ ಅಂಕಿತ
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಕಾರ್ಯವಿಧಾನವೊಂದನ್ನು ನಿಗದಿಪಡಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆಂದು ಶುಕ್ರವಾರ ಪ್ರಕಟಿಸಲಾದ ಕೇಂದ್ರ ಸರಕಾರದ ಅಧಿಸೂಚನೆಯೊಂದು ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಶರತ್ತುಗಳು ಹಾಗೂ ಅಧಿಕಾರದ ಅವಧಿ)ಮಸೂದೆ 2023ಗೆ ರಾಷ್ಟ್ರಪತಿ ಸಹಿಹಾಕಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಕೇಂದ್ರ ಕಾನೂನು ಸಚಿವ ಹಾಗೂ ಕಾರ್ಯದರ್ಶಿಗಿಂತ ಕೆಳಗಿನ ಶ್ರೇಣಿಯ ಹುದ್ದೆಯವರಲ್ಲದ ಇನ್ನಿಬ್ಬರು ವ್ಯಕ್ತಿಗಳನ್ನೊಳಗೊಂಡ ಶೋಧನಾ ಸಮಿತಿಯನ್ನು ಸ್ಥಾಪಿಸಲು ಈ ಮಸೂದೆಯು ಅವಕಾಶ ನೀಡುತ್ತದೆ.
ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣಾ ಆಯುಕ್ತರುಗಳ ನೇಮಕಾತಿ ಬಗ್ಗೆ ರಾಷ್ಟ್ರಪತಿಗೆ ಶಿಫಾರಸುಗಳನ್ನು ಮಾಡಲು ಪ್ರಧಾನಿ ನೇತೃತ್ವದ ಪ್ರತಿಪಕ್ಷ ನಾಯಕ ಹಾಗೂ ಕೇಂದ್ರ ಸಚಿವರು ಸದಸ್ಯರಾಗಿರುವ ಆಯ್ಕೆ ಸಮಿತಿಯ ರಚನೆಗೂ ಈ ಮಸೂದೆಯು ಕಾನೂನು ರೂಪಿಸಿದೆ.
ಪ್ರಕಟಣಾ ಉದ್ಯಮವನ್ನು ನಿಯಂತ್ರಿಸುವ ಬ್ರಿಟಿಶರ ಆಳ್ವಿಕೆಯ ಕಾಲದ ಕಾನೂನನ್ನು ಬದಲಾಯಿಸುವ ನಿಯತಕಾಲಿಕಗಳ ಪತ್ರಿಕಾ ಹಾಗೂ ನೋಂದಣಿ ಕಾಯ್ದೆಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ.ನೂತನ ಮಸೂದೆಯು 1867ರ ಪುಸ್ತಕಗಳ ಪ್ರಕಟಣೆ ಹಾಗೂ ನೋಂದಣಿ ಕಾಯ್ದೆಯನ್ನು ತೆರವುಗೊಳಿಸಲಿದೆ.
ನೂತನ ಮಸೂದೆಯಿಂದಾಗಿ ಸುದ್ದಿ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಎರಡು ತಿಂಗಳೊಳಗೆ ನೋಂದಣಿಗೊಳ್ಳಲು ಸಾಧ್ಯವಾಗಲಿದೆ. ಇದಕ್ಕೊ ಮೊದಲ ನೋಂದಣಿಗೆ ಎರಡರಿಂದ ಮೂರು ವರ್ಷಗಳು ತಗಲುತ್ತಿತ್ತು.
ಇದರ ಜೊತೆ ಕೇಂದ್ರೀಯ ಸರಕಾರಿ ಹಾಗೂ ಸೇವಾ ತೆರಿಗೆ (ದ್ವಿತೀಯ ತಿದ್ದುಪಡಿ) ಮಸೂದೆ 2023 ಹಾಗೂ ತೆರಿಗೆಗಳ ಸಂಗ್ರಹ ಮಸೂದೆ 2023 ಇವುಗಳಿಗೂ ರಾಷ್ಟ್ರಪತಿ ಮುರ್ಮು ಅಂಕಿತ ಹಾಕಿದ್ದಾರೆ.