ಜಿ20 ಜಾಹೀರಾತುಗಳಲ್ಲಿ ರಾರಾಜಿಸಿದ ಪ್ರಧಾನಿ ಮೋದಿ: ರಾಷ್ಟ್ರಪತಿ ಮುರ್ಮು ಕಡೆಗಣನೆ; ವರದಿ

Update: 2023-09-09 14:21 GMT

G20 | twitter \ @g20org

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯಲ್ಲಿ ಸರ್ವವ್ಯಾಪಿಯಾಗಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳು,ಪೆಟ್ರೋಲ್ ಪಂಪ್ ಗಳು, ಬಸ್ ನಿಲುದಾಣಗಳು, ಆಲದ ಮರಗಳು, ಮೆಟ್ರೋ ನಿಲ್ದಾಣಗಳ ಮುಂಭಾಗ, ಫೈಓವರ್ ಗಳು ಹೀಗೆ ಎಲ್ಲ ಕಡೆಗಳಲ್ಲೂ ರಾರಾಜಿಸಿರುವ ಜಿ20 ಜಾಹೀರಾತುಗಳಲ್ಲಿ ಪ್ರಧಾನಿ ಮೋದಿ ವಿವಿಧ ಗಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೆ.9ರಿಂದ ಸೆ.10ರವರೆಗೆ ನಡೆಯುತ್ತಿರುವ ಜಿ20 ಶೃಂಗಸಭೆಯ ಪ್ರಚಾರಕ್ಕಾಗಿ ಕೇಂದ್ರವು ಯಾವುದೇ ಸ್ಥಳವನ್ನು ಬಿಟ್ಟಿಲ್ಲ ಎಂದು newslaundry.com ವರದಿ ಮಾಡಿದೆ.

ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಷಾರಾಮಿ ಐಟಿಸಿ ಮೌರ್ಯ ಮತ್ತು ತಾಜ್ ಪ್ಯಾಲೇಸ್ ಹೋಟೆಲ್ ಗಳವರೆಗೆ 12 ಕಿ.ಮೀ.ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಜಿ20 ಪ್ರಚಾರದ ಕನಿಷ್ಠ 960 ಜಾಹೀರಾತುಗಳಿವೆ. ಇವುಗಳಲ್ಲಿ ಬಿಲ್ ಬೋರ್ಡ್ಗಳು, ಫ್ಲೆಕ್ಸಿ ಬೋರ್ಡ್ ಗಳು, ಬ್ಯಾನರ್ ಗಳು, ಡಿಜಿಟಲ್ ಪ್ಯಾನೆಲ್ ಗಳು, ಕಲಾಕೃತಿಗಳು ಇತ್ಯಾದಿಗಳು ಸೇರಿವೆ.

ಪ್ರತಿ ಕಿ.ಮೀ.ಗೆ ಎಲ್ಲ ವಿಧಗಳ 80 ಜಾಹೀರಾತುಗಳನ್ನು ಅಳವಡಿಸಲಾಗಿದ್ದು, ಮೋದಿಯವರ ಚಿತ್ರವನ್ನು ಹೊಂದಿರುವ ಕನಿಷ್ಠ 20 ಜಾಹೀರಾತುಗಳಿವೆ. ಇವುಗಳ ಸಂಖ್ಯೆ ಪ್ರತಿ 100 ಮೀ.ಗೆ ಅನುಕ್ರಮವಾಗಿ ಎಂಟು ಮತ್ತು ಎರಡು ಆಗಿವೆ.

ಈ ಮಾರ್ಗದಲ್ಲಿಯ ಅತ್ಯಂತ ಜನನಿಬಿಡ ಮತ್ತು ಹೆಚ್ಚು ಗೋಚರಿಸುವ ಸ್ಥಳಗಳಲ್ಲಿ ಮೋದಿ ಪೋಸ್ಟರ್ ಗಳಿವೆ. ದ್ರೌಪದಿ ಮುರ್ಮು ಅವರು ದೇಶದ ವಿಧ್ಯುಕ್ತ ಮುಖ್ಯಸ್ಥರಾಗಿ ಎಲ್ಲ ಜಿ20 ನಾಯಕರನ್ನು ಶೃಂಗಸಭೆಗೆ ಆಹ್ವಾನಿಸಿದ್ದಾರಾದರೂ ಈ ಬ್ರಾಂಡಿಂಗ್ ಅಬ್ಬರದಲ್ಲಿ ಅವರು ಎಲ್ಲಿಯೂ ಕಾಣಿಸುತ್ತಿಲ್ಲ. ಕೆಲವು ಮೋದಿ ಪೋಸ್ಟರ್ ಗಳಲ್ಲಿ ‘ಎಲ್ಲರಿಗೂ ಸಂಪನ್ಮೂಲ ಮತ್ತು ಪ್ರಾತಿನಿಧ್ಯ’ ಮತ್ತು ‘ವಿವಿಧತೆಯನ್ನು ಗೌರವಿಸುವುದು ಮಾತ್ರವಲ್ಲ, ಅದನ್ನು ಸಂಭ್ರಮಿಸಲಾಗುತ್ತದೆ ಸಹ’ ಎಂಬ ಘೋಷಣೆಗಳಿವೆ.

ಐಟಿಸಿ ಮೌರ್ಯ ಹೋಟೆಲ್ ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ದೇಶದ ಇತರ ಪ್ರತಿನಿಧಿಗಳು ತಂಗಿದ್ದಾರೆ. ನೆರೆಯ ತಾಜ್ ಪ್ಯಾಲೇಸ್ ಕೂಡ ಚೀನಿ ನಿಯೋಗ ಸೇರಿದಂತೆ ಹಲವಾರು ವಿದೇಶಿ ಗಣ್ಯರ ಆತಿಥ್ಯವನ್ನು ವಹಿಸಿಕೊಂಡಿದೆ. ಈ ಹೋಟೆಲ್ಗಳಿಗೆ ತೆರಳುವ ರಸ್ತೆಯು ಧೌಲಾ ಕುವಾಂ ಮೂಲಕ ಸಾಗುತ್ತದೆ.

12 ಕಿ.ಮೀ.ಉದ್ದದ ರಸ್ತೆಯ ಅತ್ಯಂತ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮೋದಿಯವರ ಜಾಹೀರಾತುಗಳೇ ಇವೆ, ಗಾತ್ರದಲ್ಲಿ ಅವರ ಬಿಲ್ಬೋರ್ಡ್ಗಳು ಮತ್ತು ಪೋಸ್ಟರ್ ಗಳು ಜಿ20 ಪ್ರಚಾರ ಸಾಧನಗಳನ್ನೂ ಮೀರಿಸಿವೆ.

ಆದರೆ ಮೋದಿ ಬ್ಯಾನರ್ ಗಳು ಮತ್ತು ಜಾಹಿರಾತು ಫಲಕಗಳು ದಿಲ್ಲಿ ಕ್ಯಾಂಟೋನ್ಮೆಂಟ್ ನಿಂದ ಧೌಲಾ ಕುವಾಂ ನಡುವಿನ ನಾಲ್ಕು ಕಿ.ಮೀ ಮತ್ತು ಸರ್ದಾರ ಪಟೇಲ್ ಮಾರ್ಗದ ಎರಡು ಕಿ.ಮೀ.ಉದ್ದಕ್ಕೂ ಹೆಚ್ಚು ಕೇಂದ್ರೀಕೃತವಾಗಿವೆ. ಇವೆರಡೂ 12 ಕಿ.ಮೀ.ಉದ್ದದ ಮಾರ್ಗದ ಭಾಗಗಳಾಗಿವೆ. ದಿಲ್ಲಿ ಕ್ಯಾಂಟೋನ್ಮೆಂಟ್ ನಿಂದ ಧೌಲಾ ಕುವಾಂ ನಡುವಿನ ನಾಲ್ಕು ಕಿ.ಮೀ. ರಸ್ತೆಯನ್ನು 122 ಮೋದಿ ಬ್ಯಾನರ್ ಗಳಿಂದ ಅಲಂಕರಿಸಲಾಗಿದ್ದು, ಪ್ರತಿ ನೂರು ಮೀಟರ್ ಗೆ ಮೂರು ಬ್ಯಾನರ್ ಗಳು ರಾರಾಜಿಸುತ್ತಿವೆ.

ಸರ್ದಾರ ಪಟೇಲ್ ಮಾರ್ಗದ ಎರಡು ಕಿ.ಮೀ.ಉದ್ದಕ್ಕೂ ಮೋದಿಯವರ 86 ಅಥವಾ ಪ್ರತಿ ನೂರು ಮೀಟರ್ ಗೆ ನಾಲ್ಕಕ್ಕೂ ಹೆಚ್ಚಿನ ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಅಂತರರಾಷ್ಟ್ರೀಯ ನಿರ್ಗಮನ ದ್ವಾರದ ಬಳಿ ನಾಲ್ಕು ಅಂತಸ್ತುಗಳ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಷ್ಟು ಎತ್ತರದ, ಮೋದಿಯವರ ಎರಡು ದೈತ್ಯ ಜಾಹೀರಾತು ಫಲಕಗಳು ‘ಜಿ20 ಪ್ರತಿನಿಧಿಗಳನ್ನು’ ಸ್ವಾಗತಿಸುತ್ತಿವೆ. ಎರಡೂ ಜಾಹೀರಾತು ಫಲಕಗಳು ಭಾರತದ ಜಿ20 ಅಧ್ಯಕ್ಷತೆಯ ಧ್ಯೇಯವಾಕ್ಯ ‘ವಸುಧೈವ ಕುಟುಂಬಕಂ’ ಜೊತೆಗೆ ಇತರ ದೇಶಗಳು ಮತ್ತು ಒಂದು ಪ್ರಾದೇಶಿಕ ಗುಂಪಿನ 29 ಧ್ವಜಗಳನ್ನು ಹೊಂದಿವೆ.

ಪೋಸ್ಟರ್ ಗಳಲ್ಲಿಯ ಘೋಷಣೆಗಳು ಆಶಾವಾದ, ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ನಾಯಕತ್ವ, ತಾಂತ್ರಿಕ ಪರಿವರ್ತನೆ, ಡಿಜಿಟಲ್ ಆರ್ಥಿಕತೆ, ಮಹಿಳೆಯರು, ಪರಿಸರ, ವಿವಿಧತೆ ಇತ್ಯಾದಿಗಳಿಗೆ ಸಂಬಂಧಿಸಿವೆ.

ಇತರ ಜಾಹೀರಾತುಗಳು ಜಿ20 ಪ್ರತಿನಿಧಿಗಳನ್ನು ಸ್ವಾಗತಿಸುತ್ತಿರುವ ಅಪರಿಚಿತ ಆದರೆ ಆತಿಥೇಯ ಮುಖಗಳನ್ನು ಬಿಂಬಿಸಿವೆ. ವಿಮಾನ ನಿಲ್ದಾಣದ ಬಳಿ ಅಳವಡಿಸಲಾಗಿರುವ ಡಿಜಿಟಲ್ ಗ್ಲಾಸ್ ಪ್ಯಾನೆಲ್ ಗಳು ಎಲ್ಲ ರಾಜ್ಯಗಳ ಸಂಸ್ಕೃತಿಗಳು ಮತ್ತು ಪಾರಂಪರಿಕ ಕಟ್ಟಡಗಳನ್ನು ಬಿಂಬಿಸಿದ್ದರೆ ರೀಮ್ಗಟ್ಟಲೆ ಲೈವರಿ ಜಾಹೀರಾತುಗಳು ವಿಮಾನ ನಿಲ್ದಾಣ ರಸ್ತೆಗಳನ್ನು ಸುತ್ತುವರಿದಿವೆ. ವೃತ್ತಗಳಲ್ಲಿ ನಮಸ್ಕಾರ ಭಂಗಿಯ ಕೈಗಳು ಮತ್ತು ಜಿ20 ಕಮಲದ ಲಾಂಛನ ಹೊಂದಿರುವ ಕಲಾಕೃತಿಗಳನ್ನು ಅಳವಡಿಸಲಾಗಿದೆ. ಕೆಲವು ಡಿಜಿಟಲ್ ಪ್ಯಾನೆಲ್ ಗಳು ಯಶಸ್ವಿ ಚಂದ್ರಯಾನ-3 ಅಭಿಯಾನವನ್ನು ಬಿಂಬಿಸಿವೆ.

ಈ ವರ್ಷದ ಎಪ್ರಿಲ್ ವರೆಗೆ ಭಾರತದ ಜಿ20 ಅಧ್ಯಕ್ಷತೆಗೆ ಸಂಬಂಧಿಸಿದಂತೆ ಹೊರಾಂಗಣ ಪ್ರಚಾರಕ್ಕಾಗಿ 50 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News