ನಾಳೆ ಶ್ರೀನಗರಕ್ಕೆ ಪ್ರಧಾನಿ ಮೋದಿ ಭೇಟಿ

Update: 2024-03-06 16:41 GMT

ನರೇಂದ್ರ ಮೋದಿ  | Photo: PTI 

ಶ್ರೀನಗರ : ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಭೇಟಿಗಾಗಿ ಗುರುವಾರ ಬೆಳಿಗ್ಗೆ ಶ್ರೀನಗರಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಸಂವಿಧಾನದ 370ನೇ ವಿಧಿ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿಯ ಬದಲಾದ ಪರಿಸ್ಥಿತಿಯನ್ನು ಪ್ರದರ್ಶಿಸಲು ಬಿಜೆಪಿಯು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

ಕಾಶ್ಮೀರವು ಭಯೋತ್ಪಾದನೆಯ ರಾಜಧಾನಿ ಎಂಬ ಕುಖ್ಯಾತಿಯನ್ನು ಹೊಂದಿತ್ತು. ಆದರೆ ಈಗ ಪ್ರಧಾನಿಯವರ ನೀತಿಗಳಿಂದಾಗಿ ಪ್ರವಾಸೋದ್ಯಮದ ರಾಜಧಾನಿಯಾಗಿ ಹೊರಹೊಮ್ಮಿದೆ. ಭ್ರಷ್ಟಾಚಾರವು ಅಂತ್ಯಗೊಂಡಿದೆ ಮತ್ತು ಜನರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ ಛುಗ್ ಹೇಳಿದರು.

ಬಿಜೆಪಿ ಸರಕಾರವು 370ನೇ ವಿಧಿ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ‘ವಿಕಾಸ್ ’ಕುರಿತು ಮಾತನಾಡುತ್ತಿದೆ. ಈಗ ಪ್ರಧಾನಿಯವರು ತಳಮಟ್ಟದ ಪರಿಸ್ಥಿತಿಯನ್ನು ಖುದ್ದಾಗಿ ತಿಳಿಯಲಿದ್ದಾರೆ.

ಅಧಿಕಾರಿಗಳ ಪ್ರಕಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಕ್ಷಿ ಕ್ರೀಡಾಂಗಣವನ್ನು ತಲುಪುವ ಮೋದಿ, ಅಲ್ಲಿ ‘ವಿಕಸಿತ ಭಾರತ ವಿಕಸಿತ ಜಮ್ಮು ಕಾಶ್ಮೀರ ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮೋದಿಯವರು ತನ್ನ ಭೇಟಿ ಸಂದರ್ಭದಲ್ಲಿ ಮಹತ್ವದ ಪ್ರಕಟಣೆಗಳನ್ನು ಮಾಡಲಿದ್ದಾರೆ ಹಾಗೂ ಜಮ್ಮು-ಕಾಶ್ಮೀರದ ಕೃಷಿ-ಆರ್ಥಿಕತೆ,ಪ್ರವಾಸೋದ್ಯಮ ಮತ್ತು ಉದ್ಯೋಗ ಕ್ಷೇತ್ರಗಳನ್ನು ಉತ್ತೇಜಿಸಲು ರೂಪಿಸಲಾಗಿರುವ ಹಲವಾರು ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಕಾಶ್ಮೀರದ ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿರುವ ಅವರು, ಸರಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದವನ್ನೂ ನಡೆಸಲಿದ್ದಾರೆ.

ಪ್ರಧಾನಿ ತನ್ನ ಭಾಷಣದಲ್ಲಿ ಅಭಿವೃದ್ಧಿ ಮತ್ತು ಭಯೋತ್ಪಾದನೆಯ ಅಂತ್ಯದ ಕುರಿತು ಮಾತನಾಡುವ ನಿರೀಕ್ಷೆಯಿದೆ. ತಮ್ಮ ಸುದೀರ್ಘ ಅಧಿಕಾರಾವಧಿಗಳಲ್ಲಿ ಕಾಶ್ಮೀರಕ್ಕೆ ಸಮೃದ್ಧಿಯನ್ನು ತರುವಲ್ಲಿ ವೈಫಲ್ಯಕ್ಕಾಗಿ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಿರುದ್ಧ ಅವರು ವಾಗ್ದಾಳಿಯನ್ನೂ ನಡೆಸಬಹುದು.

ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿದ್ದು, ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಕುರಿತು ಪ್ರಕಟಣೆಯನ್ನು ಪ್ರತಿಪಕ್ಷಗಳು ಬಯಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಏನು ಹೇಳಬಹುದು ಎನ್ನುವುದಕ್ಕೆ ಸಂಬಂಧಿಸಿದಂತೆ ಅವರ ಈ ಭೇಟಿಯು ತೀವ್ರ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ. ಬಹುನಿರೀಕ್ಷಿತ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಮತ್ತು ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಪುನರ್ಸ್ಥಾಪನೆಯ ಬಗ್ಗೆ ಮೋದಿ ಮಾತನಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಮೋದಿಯವರ ರ‍್ಯಾಲಿಗೆ ಎರಡು ಲಕ್ಷಕ್ಕಿಂತ ಅಧಿಕ ಜನರು ಸೇರುವ ನಿರೀಕ್ಷೆಯಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಬಕ್ಷಿ ಕ್ರೀಡಾಂಗಣದಲ್ಲಿ ಸ್ಥಳಾವಕಾಶದ ಕೊರತೆಯಾಗಬಹುದು. ಹೀಗಾಗಿ ಜನರು ಪ್ರಧಾನಿಯನ್ನು ನೋಡಲು ಮತ್ತು ಅವರ ಭಾಷಣವನ್ನು ಆಲಿಸಲು ಅನುಕೂಲವಾಗುವಂತೆ ನಗರದ ವಿವಿಧ ಸ್ಥಳಗಳಲ್ಲಿ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶ್ರೀನಗರದ ಪ್ರಮುಖ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ ಸುಮಾರು 50,000 ಬಿಜೆಪಿ ಧ್ವಜಗಳನ್ನು ಹಾರಿಸಲಾಗಿದೆ. ಜೊತೆಗೆ ಮೋದಿಯವರಿಗೆ ಸ್ವಾಗತ ಕೋರಿ ಭಿತ್ತಿಪತ್ರಗಳೂ ಕಾಣಿಸಿಕೊಂಡಿವೆ.

2019, ಫೆಬ್ರವರಿಯ ಬಳಿಕ ಇದು ಕಾಶ್ಮೀರ ಕಣಿವೆಗೆ ಮೋದಿಯವರ ಮೊದಲ ಭೇಟಿಯಾಗಿದೆ. ಹಿಂದಿನ ಭೇಟಿ ಸಂದರ್ಭ ಜಲ ವಿದ್ಯುತ್ ಕೇಂದ್ರವೊಂದಕ್ಕೆ ಚಾಲನೆ ನೀಡಿದ್ದ ಅವರು ಪ್ರದೇಶದಲ್ಲಿಯ ಭದ್ರತಾ ಸಭೆಯೊಂದರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಬಿಗು ಭದ್ರತೆಯನ್ನು ಏರ್ಪಡಿಸಲಾಗಿದೆ. ಡ್ರೋನ್ ಗಳ ಮೂಲಕ ಕಣ್ಗಾವಲನ್ನು ತೀವ್ರಗೊಳಿಸಲಾಗಿದ್ದು, ಹೆಚ್ಚಿನ ಚೆಕ್ ಪೋಸ್ಟ್ ಗಳು ಮತ್ತು ಬ್ಯಾರಿಕೇಡ್ ಗಳನ್ನು ಸ್ಥಾಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News