ಸಂಸತ್ತಿನಲ್ಲಿ ಪ್ರಧಾನಿಯ ಭಾಗವಹಿಸುವಿಕೆ ಕೇವಲ 0.001% : ಸಂಸದ ಡಾ ಜಾನ್ ಬ್ರಿಟ್ಟಾಸ್
ಹೊಸದಿಲ್ಲಿ : ಪ್ರಧಾನಿಯ ಅನುಪಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕ ಮಾತನಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಭಾಗವಹಿಸುವಿಕೆ ಕೇವಲ 0.001% ಮಾತ್ರ ಎಂದು ಕೇರಳ ಸಿಪಿಎಂ ರಾಜ್ಯಸಭಾ ಸಂಸದ ಡಾ ಜಾನ್ ಬಿಟ್ಟಾಸ್ ನೇರ ಆರೋಪ ಮಾಡಿದ್ದಾರೆ.
ಸಂಸತ್ತಿನ ವಿಶೇಷ ಅಧಿವೇಶನದ ಸಂದರ್ಭ ಸಂಸತ್ತನ್ನು ಉದ್ದೇಶಿಸಿ ಅವರು ಮಾಡಿದ್ದ ಭಾಷಣ ಈಗ ವೈರಲ್ ಆಗಿದೆ. ತಮ್ಮ ಭಾಷಣದಲ್ಲಿ ಸಂವಿಧಾನ ಪೀಠಿಕೆಯ ಕುರಿತು ಮಾತನಾಡಿದ್ದ ಕೇರಳದ ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್, ಸಂವಿಧಾನದ ಪೀಠಿಕೆಯಲ್ಲಿ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ಎಂದಿದೆ. ಜೊತೆಗೆ ನ್ಯಾಯದಾನ ಕುರಿತು ಬರೆಯಲಾಗಿದೆ. ನ್ಯಾಯದಾನ ಬಗ್ಗೆ ನೋಡುವುದಾದರೆ ನಾವು ಈಗ ಬುಲ್ಡೋಝರ್ ಲೋಕಕ್ಕೆ ತಲುಪಿದ್ದೇವೆ. ಅದೇ ಈಗಿನ ಪ್ರಕಾರ ಅದೇ ನ್ಯಾಯದಾನ ವ್ಯವಸ್ಥೆ ಎಂದು ಮಾರ್ಮಿಕವಾಗಿ ನುಡಿದರು.
ಕಳೆದ 9 ವರ್ಷದಲ್ಲಿ ಸರಕಾರ ಬದಲಾದ ನಂತರ ಬದಲಾದ ಭಾರತದ ಕಡೆಗೆ ತಮ್ಮ ಭಾಷಣದುದ್ದಕ್ಕೂ ಬೆಳಕು ಚೆಲ್ಲಿದ ಬ್ರಿಟ್ಟಾಸ್ ಅವರು, ಸಂವಿಧಾನದ ಪೀಠಿಕೆಯಲಿ ಪ್ರಜಾಪ್ರಭುತ್ವ ಎಂಬ ಪದವಿದೆ. ಸಂಸತ್ನಲ್ಲಿರುವ ಹೆಚ್ಚಿನ ಸದಸ್ಯರು ಪ್ರಜಾಪ್ರಭುತ್ವ ಎನ್ನುವುದು ಮೋದಿ ಪ್ರಭುತ್ವವಾಗಿ ಬದಲಾಗಿದೆ ಎನ್ನುವುದು ತಿಳಿದಿದ್ದಾರೆ. ಏಕೆಂದರೆ ಎಲ್ಲೆಡೆ ಪ್ರಧಾನಿ ಮೋದಿಯೇ ರಾರಾಜಿಸುತ್ತಿದ್ದಾರೆ ಎಂದರು.
ನಾನು ಸಂಸತ್ತನ್ನು ಹೊರಗಿನಿಂದ ನಿಂತು ನೋಡುತ್ತಿದ್ದೆ. ಈಗ ಈ ಸಂಸತ್ತಿನ ಭಾಗವಾಗಿದ್ದೇನೆ. ಸದಸ್ಯನಾಗಿ ಒಳಭಾಗದಲ್ಲಿ ಕುಳಿತು ನೋಡುತ್ತಿದ್ದೇನೆ. ಈ ಸದನದ ನಾಯಕ ಒಳ್ಳೆಯ ಮಾತುಗಾರ. ಆದರೆ ಅವರು ಜವಹರ್ ಲಾಲ್ ನೆಹರು ಅವರಂತ ಮಹಾನ್ ವ್ಯಕ್ತಿಗಳ ಹೆಸರನ್ನು ಬೇಕೆಂದೇ ಮರೆತಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಭಾಷಣದಲ್ಲಿ ಆ ಮರೆತ ಹೆಸರನ್ನು ನೆನಪಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಅಲ್ಪಸಂಖ್ಯಾತರ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲಿದ ಅವರು 20 ಕೋಟಿ ಅಲ್ಪಸಂಖ್ಯಾತರಿರುವ ಈ ದೇಶದಲ್ಲಿ ಶಾಸಕಾಂಗ,ನ್ಯಾಯಾಂಗ,ಕಾರ್ಯಾಂಗ, ಮಾಧ್ಯಮಗಳಲ್ಲಿ ಅವರ ಪ್ರಾತಿನಿಧಿತ್ವ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.ಈ ಸರ್ಕಾರ ಮೊಘಲರ ಬಗ್ಗೆ ಮಾತಾನಾಡುತ್ತದೆ. ಭಾರತೀಯರ ಬಗ್ಗೆ ಮಾತನಾಡುವುದಕ್ಕಿಂತ ಮೊಘಲರ ಬಗ್ಗೆ ಮಾತನಾಡುವುದು ಉತ್ತಮ. ಏಕೆಂದರೆ ಅದು ಅಕ್ಬರ್ ನ ಸಂಸ್ಥಾನವಾಗಿರಲಿ, ಔರಂಗಜೇಬನದಾಗಿರಲಿ, ಅಲ್ಲಿ 50%ಕ್ಕಿಂತ ಹೆಚ್ಚಿನ ಸಚಿವರುಗಳು ಹಿಂದೂಗಳಿದ್ದರು. ಅಕ್ಬರ್ ನ ಸಂಸ್ಥಾನದಲ್ಲಿದ್ದ ಬೀರಬಲ್ ಬಗ್ಗೆ ನಮಗೆಲ್ಲಾ ಗೊತ್ತಿದೆ. ಅತನೂ ಹಿಂದೂ ಆಗಿದ್ದ. ಈಗಿನ ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬರಾದರೂ ಅಲ್ಪಸಂಖ್ಯಾತರಿದ್ದಾರಾ? ಎಂದು ಪ್ರಶ್ನಿಸಿದರು.
ಪರಂಪರೆಯನ್ನು ನೋಡುವುದಾದರೆ, ನೆಹರೂ ಸರ್ಕಾರ ಮಾದರಿ ಸರ್ಕಾರವಾಗಿತ್ತು. ಅಲ್ಲಿ ಸಮಾಜದ ಪ್ರತೀ ವರ್ಗಕ್ಕೂ ಪ್ರತಿನಿಧಿತ್ವ ಇತ್ತು. ಮೌಲಾನಾ ಆಝಾದ್, ಶಾಮ್ ಪ್ರಸಾದ್ ಮುಖರ್ಜಿಯವರೂ ಆ ಸಂಪುಟದಲಿದ್ದರು. ಮೌಲಾನಾ ಆಝಾದ್ ಅವರು ಜುಮಾ ಮಸೀದಿಯ ಮೆಟ್ಟಿಲಲ್ಲಿ ನಿಂತು, ಇದು ನಮ್ಮ ದೇಶ. ಯಾರೂ ಇಲ್ಲಿಂದ ಹೊರಹೋಗುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ಸಹೋದರತ್ವ ಅಥವಾ ಭಾತೃತ್ವ ಪದದ ಈಗಿನ ಹೊಸ ಬಳಕೆಯೇನು ಗೊತ್ತೇ? ಪಾಕಿಸ್ತಾನಕ್ಕೆ ಹೋಗಿ ಎನ್ನುವುದು. ಯಾರು ಏನೇ ಮಾತನಾಡಿದರೂ ಬರುವ ಕೊನೆಯ ಪದ ಪಾಕಿಸ್ತಾನಕ್ಕೆ ಹೋಗಿ ಎನ್ನುವುದು. ರಾಷ್ಟ್ರದ್ರೋಹ ಪದವನ್ನೂ ತಪ್ಪಾಗಿ ಅರ್ಥೈಸಲಾಗಿದೆ. ಈ ದೇಶದ ಬಗ್ಗೆ ನಿಮಗೆಷ್ಟು ದೇಶಭಕ್ತಿಯಿದೆಯೋ, ನಮಗೂ ಅಷ್ಟೇ ಇದೆ ಎಂದು ಸಂಸದರು ಖಾರವಾಗಿ ನುಡಿದರು.
ಸಾರ್ವಭೌಮತ್ವ ಎನ್ನುವುದು ಟ್ರಂಪ್ - ಬೈಡೆನ್ ನಂತಹಾ ನಾಯಕರನ್ನು ಕರೆಸಿ ಹೊಗಳುವುದು ಎನ್ನುವಂತಾಗಿದೆ. ನಮ್ಮಲ್ಲೇ ಇರುವ ನೆಹರುವನ್ನು ನೀವು ಮರೆತಿದ್ದೀರಿ. ಸಮಾಜವಾದ ಎನ್ನುವುದು ಅದಾನಿವಾದ ಆಗಿದೆ. ಈ ದೇಶದಲ್ಲಿ ಹಲವು ಜನರಿಗೆ ರಿಪಬ್ಲಿಕ್ (ಗಣರಾಜ್ಯ) ಎಂದರೆ ಅರ್ನಬ್ ಗೋಸ್ವಾಮಿ ಎಂಬಂತಾಗಿದೆ. ಇದು ಈ ದೇಶದ ಈಗಿನ ವ್ಯವಸ್ಥೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಕಚೇರಿಯಲ್ಲಿ ಕೂತ ಒಬ್ಬ ವ್ಯಕ್ತಿ ಈ ಸಂವಿಧಾನ ನಿರುಪಯುಕ್ತ. ಇದು ಕೇವಲ 17 ವರ್ಷ ಬಳಸಲು ಯೋಗ್ಯ. ನನಗೆ ಸಮಾಜವಾದ ಮತ್ತು ಜಾತ್ಯಾತೀತತೆ ಎಂಬ ಪದದ ಅರ್ಥಗಳೇ ಗೊತ್ತಿಲ್ಲ ಎನ್ನುತ್ತಾನೆ. ಅದೇ ವ್ಯಕ್ತಿ ಪ್ರಧಾನಿಯ ಆರ್ಥಿಕ ಸಲಹೆಗಾರ. ಆತನಿಗೆ ಹಾಗೆ ಹೇಳಲು ಅಷ್ಟೊಂದು ಧೈರ್ಯ ಇದೆಯೇ? ಯಾರಿಗಾದರೂ ಸಂಪುಟ ದರ್ಜೆಯ ಸಚಿವರಿಗೆ ಆತನಿಗೆ ಬಾಯಿ ಮುಚ್ಚು ಎಂದು ಹೇಳುವ ಧೈರ್ಯ ಇದೆಯೇ? ಯಾರಾದರೂ ಹೇಳಿದ್ದಾರೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.