ಶಾಲೆಯಲ್ಲಿ ಕ್ರೈಸ್ತರ ಪ್ರಾರ್ಥನೆ ಆರೋಪ: ಶಾಲೆಗೆ ನುಗ್ಗಿ ಪ್ರಾಂಶುಪಾಲರಿಗೆ ಹಲ್ಲೆಗೈದ ಸಂಘಪರಿವಾರದ ಕಾರ್ಯಕರ್ತರು; ವರದಿ

Update: 2023-07-06 10:32 GMT

Screengrab : Twitter / @B5001001101

ಪುಣೆ: ಪುಣೆಯ ತಾಲೆಗಾಂವ್‌ ದಭಾದೆ ಪಟ್ಟಣದಲ್ಲಿರುವ ಡಿ ವೈ ಪಾಟೀಲ್‌ ಹೈಸ್ಕೂಲಿನಲ್ಲಿ ಮಂಗಳವಾರದ ಅಸೆಂಬ್ಲಿ ವೇಳೆ ವಿದ್ಯಾರ್ಥಿಗಳು ಕ್ರೈಸ್ತ ಧರ್ಮದ ಪ್ರಾರ್ಥನೆ ನಡೆಸಿದ್ದಾರೆಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಕೆಲವರು ಶಾಲೆಯ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು scroll.in ವರದಿ ಮಾಡಿದೆ.

ಈ ಘಟನೆಯ ವೀಡಿಯೋ ವೈರಲ್‌ ಆಗಿದ್ದು ಅದರಲ್ಲಿ ಪ್ರಾಂಶುಪಾಲ ಅಲೆಕ್ಸಾಂಡರ್‌ ಕೋಟ್ಸ್‌ ರೀಡ್‌ ಅವರನ್ನು ಗುಂಪೊಂದು ಬೆನ್ನಟ್ಟುತ್ತಿರುವುದು ಹಾಗೂ ಆ ಗುಂಪಿನಲ್ಲಿದ್ದವರು 'ಹರ್‌ ಹರ್‌ ಮಹಾದೇವ್‌' ಘೋಷಣೆಗಳನ್ನು ಕೂಗುವುದು ಕೇಳಿಸುತ್ತದೆ.

ಕಟ್ಟಡವೊಂದರ ಮೆಟ್ಟಿಲುಗಳನ್ನು ಅವಸರದಿಂದ ಪ್ರಾಂಶುಪಾಲರು ಹತ್ತುತ್ತಿರುವುದು ಹಾಗೂ ಅವರ ಬಟ್ಟೆ ಹರಿದಿರುವುದು ಕಾಣಿಸುತ್ತದೆ. ನಂತರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಪ್ರಾಂಶುಪಾಲರಿಗೆ ಹಲ್ಲೆ ನಡೆಸುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಅಷ್ಟರಲ್ಲಿ ಕೆಲವರು ಅಲ್ಲಿಗೆ ಆಗಮಿಸಿ ದುಷ್ಕರ್ಮಿಗಳನ್ನು ತಡೆಯುತ್ತಾರೆ.

ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆಯೆನ್ನಲಾಗಿದೆ. ಸುಮಾರು 100 ಜನರಿದ್ದ ಗುಂಪು ಶಾಲಾ ಕಟ್ಟಡಕ್ಕೆ ನುಗ್ಗಿತ್ತು ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಮತ್ತು ಇತರ ಶಿಕ್ಷಕರು ಪ್ರಾಂಶುಪಾಲರಿಗೆ ಬೆಂಬಲವಾಗಿ ನಿಂತಿದ್ದಾರೆಂದು ತಿಳಿದು ಬಂದಿದೆ.

ಘಟನೆ ಕುರಿತು ಇನ್ನೂ ಯಾವುದೇ ಪೊಲೀಸ್‌ ದೂರು ದಾಖಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News