ರಾಜ್ಯಗಳಿಂದ ಕಡಿಮೆ ಅನುದಾನ: ಆಯುಷ್ಮಾನ್ ಭಾರತ್‌ನಿಂದ ಹಿಂದೆ ಸರಿಯುತ್ತಿರುವ ಖಾಸಗಿ ಆಸ್ಪತ್ರೆಗಳು; ವರದಿ

Update: 2024-05-09 10:36 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ವಿಮಾ ಯೋಜನೆ (ಎಬಿ-ಪಿಎಂಜೆಎವೈ)ಗೆ ರಾಜ್ಯ ಸರಕಾರಗಳಿಂದ ಸಾಕಷ್ಟು ಹಣ ಹಂಚಿಕೆಯಾಗದ ಹಿನ್ನೆಲೆಯಲ್ಲಿ ಪಾವತಿ ವಿಳಂಬದಿಂದಾಗಿ ಹಲವು ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳು ಯೋಜನೆಯ ಫಲಾನುಭವಿಗಳಿಗೆ ತಮ್ಮ ಸೇವೆಗಳನ್ನು ಕಡಿತಗೊಳಿಸಿವೆ ಎಂದು livemint.com ವರದಿ ಮಾಡಿದೆ.

2018ರಲ್ಲಿ ಆರಂಭಗೊಂಡ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ 60:40ರ ಅನುಪಾತದಲ್ಲಿ ಹಣವನ್ನು ಒದಗಿಸುತ್ತಿದ್ದು, ಕೇಂದ್ರ ಸರಕಾರವು ಈ ವರ್ಷ 7,500 ಕೋಟಿ ರೂ.ಗಳನ್ನು ನಿಗದಿಗೊಳಿಸಿದೆ.

ಮೇ 1ರಂದು ಯೋಜನೆಯ ಪುನರ್‌ಪರಿಶೀಲನೆ ಸಭೆಯನ್ನು ನಡೆಸಿದ್ದ ನೀತಿ ಆಯೋಗ, ಆರೋಗ್ಯ ಸಚಿವಾಲಯ ಮತ್ತು ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳು ವಿಮಾ ಯೋಜನೆಗೆ ರಾಜ್ಯಗಳು ಸಾಕಷ್ಟು ಹಣಕಾಸು ಬಿಡುಗಡೆ ಮಾಡದಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿಷಯವನ್ನು ಬಲ್ಲ ಮೂಲಗಳು ತಿಳಿಸಿವೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದಂತಹ ಕೆಲವು ರಾಜ್ಯಗಳು ತಮ್ಮ ರಾಜ್ಯ ಆರೋಗ್ಯ ಯೋಜನೆಯನ್ನು ಆಯುಷ್ಮಾನ್ ಭಾರತ್ ಜೊತೆ ವಿಲೀನಗೊಳಿಸಿದ ಬಳಿಕ ಆಸ್ಪತ್ರೆಗಳಿಗೆ ಹಣಪಾವತಿಯಲ್ಲಿ ವಿಳಂಬದ ಸಮಸ್ಯೆ ಉದ್ಭವಿಸಿದೆ ಎಂದು ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಪ್ರತಿನಿಧಿಸುತ್ತಿರುವ ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಆಫ್ ಇಂಡಿಯಾ (ಎಎಚ್‌ಪಿಐ)ದ ಮಹಾನಿರ್ದೇಶಕ ಗಿರಧರ ಜ್ಞಾನಿ ತಿಳಿಸಿದರು.

ಮರುಪಾವತಿಯನ್ನು ಪಡೆಯುವಲ್ಲಿ ಅತಿಯಾದ ವಿಳಂಬವು ಈ ಖಾಸಗಿ ಆಸ್ಪತ್ರೆಗಳ ನಗದು ಹರಿವಿಗೆ ವ್ಯತ್ಯಯವನ್ನುಂಟು ಮಾಡಿದೆ ಮತ್ತು ಗಂಭೀರ ಕಾರ್ಯಾಚರಣೆ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದರು.

ಆಯುಷ್ಮಾನ್ ಭಾರತ್ ಯೋಜನೆಯು ಖಾಸಗಿ ಆಸ್ಪತ್ರೆಗಳಿಗೆ ಹೊರೆಯಾಗಿದೆ. ಆರಂಭದಲ್ಲಿ ಈ ಖಾಸಗಿ ಆಸ್ಪತ್ರೆಗಳು ಯೋಜನೆಯಿಂದಾಗಿ ತಮ್ಮಲ್ಲಿನ ಖಾಲಿ ಹಾಸಿಗೆಗಳು ಸಬ್ಸಿಡಿ ದರದಲ್ಲಿ ರೋಗಿಗಳಿಂದ ಭರ್ತಿಯಾಗುತ್ತವೆ ಎಂದು ಭಾವಿಸಿದ್ದವು,ಆದರೆ ಅದು ಈಗ ಅವುಗಳ ಲಾಭಗಳನ್ನು ತಿನ್ನುತ್ತಿದೆ ಎಂದು ತಿಳಿಸಿದ ಮೂಲಗಳು,ಖಾಸಗಿ ಆಸ್ಪತ್ರೆಗಳು ಎತ್ತಿರುವ ಕಳವಳಗಳನ್ನು ಪರಿಹರಿಸಲು ಸರಕಾರವು ಪ್ರಯತ್ನಿಸುತ್ತಿದೆ ಎಂದವು.

ಹಣಕಾಸು ಇಲಾಖೆಯು ಖಾಸಗಿ ಆಸ್ಪತ್ರೆಗಳ ಬಾಕಿಯುಳಿದಿರುವ ಬಿಲ್‌ಗಳನ್ನು ಪರಿಶೀಲಿಸುತ್ತಿದೆ ಎಂದು ಆಂಧ್ರಪ್ರದೇಶದ ರಾಜ್ಯ ಆರೋಗ್ಯ ಪ್ರಾಧಿಕಾರದ ಸಿಇಒ ಲಕ್ಷ್ಮಿ ಶಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪಿಎಂಜೆಎವೈ ಪ್ರಸ್ತುತ 30,178 ನೋಂದಾಯಿತ ಆಸ್ಪತ್ರೆಗಳ ಜಾಲವನ್ನು ಹೊಂದಿದೆ. ಇವುಗಳಲ್ಲಿ 12,881 ಖಾಸಗಿ ಆಸ್ಪತ್ರೆಗಳು ಸೇರಿದ್ದು, 27 ವಿಶೇಷತೆಗಳಲ್ಲಿ 2,000ಕ್ಕೂ ಅಧಿಕ ಚಿಕಿತ್ಸಾ ವಿಧಾನಗಳನ್ನು ಒದಗಿಸುತ್ತಿವೆ.

ಆಸ್ಪತ್ರೆಗಳು ಕಡಿಮೆ ಚಿಕಿತ್ಸಾ ಶುಲ್ಕಗಳನ್ನು ಒಪ್ಪಿಕೊಳ್ಳುತ್ತವೆ,ಆದರೆ ನಗದು ಹರಿವಿಗೆ ಅಡ್ಡಿಯುಂಟಾದರೆ ಅವು ಯೋಜನೆಯನ್ನು ಸ್ವೀಕರಿಸುವುದಿಲ್ಲ ಮತ್ತು ಹಾಸಿಗೆಗಳ ಅಲಭ್ಯತೆಯನ್ನು ಉಲ್ಲೇಖಿಸಿ ಫಲಾನುಭವಿಗಳನ್ನು ದೂರವಿಡಲು ಪ್ರಾರಂಭಿಸುತ್ತವೆ ಎಂದು ಹೇಳಿದ ಜ್ಞಾನಿ,ಈ ಸಮಸ್ಯೆಯನ್ನು ಸಾಧ್ಯವಿದ್ದಷ್ಟು ಶೀಘ್ರ ಪರಿಹರಿಸುವಂತೆ ಸರಕಾರಕ್ಕೆ ಅಹವಾಲು ಸಲ್ಲಿಸಲಾಗಿದೆ ಎಂದರು.

ಪಿಎಂಜೆಎವೈ ಯೋಜನೆಯಡಿ ಹೆಚ್ಚು ಜನರನ್ನು ಸೇರಿಸಲು ಬಯಸಿದರೆ ಅದಕ್ಕಾಗಿ ಹೆಚ್ಚುವರಿ ಹಣವನ್ನು ರಾಜ್ಯ ಸರಕಾರಗಳೇ ನೀಡಬೇಕು ಮತ್ತು ಅದಕ್ಕಾಗಿ ತಾನು ಯಾವುದೇ ಪಾಲು ನೀಡುವುದಿಲ್ಲ ಎಂದು ಕೇಂದ್ರ ಸರಕಾರವು ರಾಜ್ಯಗಳಿಗೆ ನಿರಂತರವಾಗಿ ತಿಳಿಸುತ್ತಲೇ ಬಂದಿದೆ ಎಂದೂ ಜ್ಞಾನಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News