ಮಧ್ಯಪ್ರದೇಶ: 500 ರೂ. ಗೆ ಸಿಲಿಂಡರ್, ಉಚಿತ ಶಿಕ್ಷಣ, ಜಾತಿ ಗಣತಿಯ ಭರವಸೆ ನೀಡಿದ ಪ್ರಿಯಾಂಕಾ ಗಾಂಧಿ
ಮಂಡ್ಲ: 12 ತರಗತಿವರೆಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ಭತ್ಯೆ ನೀಡುವ ಭರವಸೆಯನ್ನು ಚುನಾವಣಾ ರಾಜ್ಯವಾದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ನವೆಂಬರ್ 17ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಆದಿವಾಸಿಗಳ ಬಾಹುಳ್ಯವಿರುವ ಮಂಡ್ಲ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇತರೆ ಹಿಂದುಳಿದ ವರ್ಗಗಳು ಹಾಗೂ ಆದಿವಾಸಿಗಳು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗಾವಕಾಶದ ಪಾಲನ್ನು ಪಡೆಯದಿರುವುದರಿಂದ ಜಾತಿ ಗಣತಿ ನಡೆಸಲಾಗುವುದು ಎಂಬ ಭರವಸೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದರು.
“ಇತ್ತೀಚೆಗೆ ಬಿಹಾರದಲ್ಲಿ ಜಾತಿ ಗಣತಿ ನಡೆಸಲಾಗಿದ್ದು, ಆ ರಾಜ್ಯದ ಜನಸಂಖ್ಯೆಯಲ್ಲಿ ಶೇ. 84ರಷ್ಟು ಮಂದಿ ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಸೇರಿರುವುದು ಬಹಿರಂಗವಾಗಿದೆ. ಆದರೆ, ಉದ್ಯೋಗಗಳಲ್ಲಿ ಅವರು ಪಡೆದಿರುವ ಪ್ರಾತಿನಿಧ್ಯವು ತೀರಾ ಕಡಿಮೆ ಇದೆ. ಈ ಸಮುದಾಯಗಳ ನಿಖರ ಜನಸಂಖ್ಯೆಯನ್ನು ತಿಳಿಯಲು ಹಾಗೂ ಅವುಗಳಿಗೆ ನ್ಯಾಯ ಒದಗಿಸಲು ದೇಶಾದ್ಯಂತ ಜಾತಿ ಗಣತಿ ನಡೆಯಬೇಕಿದೆ” ಎಂದು ಅವರು ಅಭಿಪ್ರಾಯ ಪಟ್ಟರು.
“ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಈ ಕುರಿತು ಮಾತನಾಡುವುದು ಬೇಕಿಲ್ಲ. ಇತರೆ ಹಿಂದುಳಿದ ವರ್ಗಗಳು ಹಾಗೂ ಆದಿವಾಸಿಗಳಿಗೆ ಅನ್ಯಾಯವೆಸಗಲಾಗಿದೆ. ಅವರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗಾವಕಾಶಗಳನ್ನು ಪಡೆಯುತ್ತಿಲ್ಲ. ಅವರಿಗೆ ನ್ಯಾಯವನ್ನು ಒದಗಿಸಲು ಅವರ ಜನ ಸಂಖ್ಯೆ ಎಷ್ಟಿದೆ ಎಂಬುದು ನಮಗೆ ಬೇಕಿದೆ” ಎಂದೂ ಹೇಳಿದರು.
ಪ್ರಿಯಾಂಕಾ ಗಾಂಧಿ ನೀಡಿದ ಇತರೆ ಭರವಸೆಗಳು
• ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯ ಮರು ಜಾರಿ
• 1-12ನೇ ತರಗತಿಯವರೆಗೆ ಉಚಿತ ಶಿಕ್ಷಣ; ‘ಓದಿ-ಬೋಧಿಸಿ’ ಯೋಜನೆಯಡಿ 1-8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾಸಿಕ ರೂ. 500 ಭತ್ಯೆ; 9-10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರೂ. 1,000 ಭತ್ಯೆ ಹಾಗೂ 11-12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರೂ. 1,500 ಭತ್ಯೆ
• ಜೀವನೋಪಾಯಕ್ಕಾಗಿ ವೀಳ್ಯದೆಲೆ ಮಾರುವ ಮಹಿಳೆಯರಿಗೆ ಶೂ ಬದಲು ಬೋನಸ್
• ರೂ. 500ರ ದರದಲ್ಲಿ ಅನಿಲ ಸಿಲಿಂಡರ್
• ಮಹಿಳೆಯರಿಗೆ ರೂ. 1,500 ಮಾಸಿಕ ಭತ್ಯೆ
• ಪ್ರತಿ ಗೃಹೋಪಯೋಗಿ ಮನೆಗಳಿಗೆ 100 ಯೂನಿಟ್ ವರೆಗೆ ಉಚಿತ ವಿದ್ಯುತ್ ಹಾಗೂ 200 ಯೂನಿಟ್ ವರೆಗೆ ಅರ್ಧ ದರ
• ರೈತರ 5 ಅಶ್ವ ಶಕ್ತಿವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್