ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ವಿರುದ್ಧದ ಪ್ರತಿಭಟನೆ ಅಂತ್ಯ: ಕರ್ತವ್ಯಕ್ಕೆ ಮರಳಿದ ವೈದ್ಯರು

Update: 2024-08-23 12:46 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ಕೋಲ್ಕತ್ತಾ ವೈದ್ಯೆಯೊಬ್ಬರ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಾನಿಕ ವೈದ್ಯರು, ಸುಪ್ರೀಂಕೋರ್ಟ್ ಮನವಿಯನ್ನು ಮನ್ನಿಸಿ ಶುಕ್ರವಾರ ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ.

ಆಗಸ್ಡ್ 9ರಂದು ಕೋಲ್ಕತ್ತಾದ ಸರಕಾರಿ ಆಸ್ಪತ್ರೆಯಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿನಿರತ ವೈದ್ಯೆಯ ಮೃತದೇಹ ಪತ್ತೆಯಾದ ನಂತರ, ದೇಶಾದ್ಯಂತ ಇರುವ ಆರೋಗ್ಯ ಸೇವಾ ಸಿಬ್ಬಂದಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ, ಪ್ರತಿಭಟನೆಗೆ ಮುಂದಾಗಿದ್ದರು.

ಇದರಿಂದ ತುರ್ತಲ್ಲದ ಸೇವೆಗಳಾದ ಹೊರ ರೋಗಿ ವಿಭಾಗಗಳ ಸೇವೆ ವ್ಯತ್ಯಯಗೊಂಡಿತ್ತು. ವೈದ್ಯಕೀಯ ಸಿಬ್ಬಂದಿಗಳಲ್ಲದೆ ಸ್ಥಾನಿಕ ವೈದ್ಯರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ 12ರ ಸಂಜೆಯಿಂದ ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರ ನಡೆಸುತ್ತಿರುವ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರಕ್ಕಿಳಿದಿದ್ದರು. ಇದರಿಂದ ರೋಗಿಗಳಿಗೆ ಭಾರಿ ಸಮಸ್ಯೆಯುಂಟಾಗಿತ್ತು.

ಏಮ್ಸ್, ಆರ್‌ಎಂಎಲ್ ಆಸ್ಪತ್ರೆ, ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು, ದಿಲ್ಲಿ ಸರಕಾರ ನಡೆಸುವ ಎಲ್‌ಎನ್‌ಜೆಪಿ ಆಸ್ಪತ್ರೆ, ಮೌಲಾನಾ ಆಝಾದ್ ವೈದ್ಯಕೀಯ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳು ಇಂದಿನಿಂದ ತಮ್ಮ ಸೇವೆಯನ್ನು ಪುನಾರಂಭಿಸಿದ್ದಾರೆ. ಇದಕ್ಕೂ ಮುನ್ನ, ಗುರುವಾರ ಸಂಜೆ ಎರಡು ರಾಷ್ಟ್ರಮಟ್ಟದ ವೈದ್ಯಕೀಯ ಸಂಘಟನೆಗಳು ಮುಷ್ಕರವನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News