ಜಾತೀಯತೆ ಮತ್ತು ಲಿಂಗ ತಾರತಮ್ಯ ಆರೋಪಿಸಿ ಪುದುಚೇರಿಯ ಏಕೈಕ ಸಚಿವೆಯ ರಾಜೀನಾಮೆ

Puducherry's sole minister resigns on charges of casteism and gender discrimination

Update: 2023-10-10 16:17 GMT

 ಚಂದಿರಾ ಪ್ರಿಯಾಂಗಾ | Photo: NDTV 

ಪುದುಚೇರಿ: ಪುದುಚೇರಿಯ ಏಕೈಕ ಮಹಿಳಾ ಶಾಸಕಿ ಹಾಗೂ ಸಚಿವೆ ಚಂದಿರಾ ಪ್ರಿಯಾಂಗಾ ಅವರು ಜಾತೀಯತೆ ಮತ್ತು ಲಿಂಗ ತಾರತಮ್ಯವನ್ನು ಎದುರಿಸುತ್ತಿರುವುದಾಗಿ ಹಾಗೂ ಪಿತೂರಿ ಮತ್ತು ಹಣಬಲದ ರಾಜಕೀಯವನ್ನು ಆರೋಪಿಸಿ ಎಐಎನ್ಆರ್ಸಿ-ಬಿಜೆಪಿ ಸಮ್ಮಿಶ್ರ ಸಂಪುಟಕ್ಕೆ ಮಂಗಳವಾರ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ನೆಡುಂಗಾಡು ಶಾಸಕಿ ಪ್ರಿಯಾಂಗಾ 2021ರಲ್ಲಿ 40 ವರ್ಷಗಳ ಬಳಿಕ ಪುದುಚೇರಿ ಸರಕಾರದಲ್ಲಿ ಸಚಿವೆಯಾಗಿ ನೇಮಕಗೊಂಡ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗ ಎನ್.ರಂಗಸ್ವಾಮಿ ನೇತೃತ್ವದ ಸಮ್ಮಿಶ್ರ ಸಂಪುಟದಲ್ಲಿ ಅವರಿಗೆ ಸಾರಿಗೆ ಖಾತೆಯನ್ನು ವಹಿಸಲಾಗಿತ್ತು.

ಪ್ರಿಯಾಂಗಾ 2021ರ ವಿಧಾನಸಭಾ ಚುನಾವಣೆಯಲ್ಲಿ ಕಾರೈಕಲ್ ನ ನೆಡುಂಗಾಡು ಮೀಸಲು ಕ್ಷೇತ್ರದಿಂದ ಎಐಎನ್ಆರ್ಸಿ ಅಭ್ಯರ್ಥಿಯಾಗಿ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದರು.

ಮಂಗಳವಾರ ಪ್ರಿಯಾಂಗಾ ತನ್ನ ಕಾರ್ಯದರ್ಶಿಯ ಮೂಲಕ ಮುಖ್ಯಮಂತ್ರಿ ಕಚೇರಿ (ಸಿಎಂಒ)ಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ರಾಜೀನಾಮೆ ಪತ್ರದ ಸ್ವೀಕೃತಿಯನ್ನು ದೃಢಪಡಿಸಿರುವ ಸಿಎಂಒ,ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದೆ.

ಪ್ರಿಯಾಂಗಾರ ರಾಜೀನಾಮೆ ಪತ್ರದ ಪ್ರತಿಯನ್ನು ಮಾಧ್ಯಮಗಳಿಗೆ ವಿತರಿಸಲಾಗಿದೆ. ತನ್ನ ಕ್ಷೇತ್ರದ ಜನರ ನಡುವೆ ತನ್ನ ಜನಪ್ರಿಯತೆಯಿಂದಾಗಿ ತಾನು ವಿಧಾನಸಭೆಯನ್ನು ಪ್ರವೇಶಿಸಿದ್ದರೂ ಕೆಲವು ಮಿತಿಗಳಾಚೆ ಪಿತೂರಿಯ ರಾಜಕೀಯವನ್ನು ಎದುರಿಸುವುದು ಸುಲಭವಲ್ಲ ಮತ್ತು ಹಣಬಲದ ವಿರುದ್ಧ ಹೋರಾಡಲಾಗುವುದಿಲ್ಲ ಎನ್ನುವುದನ್ನು ತಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿರುವ ಪ್ರಿಯಾಂಗಾ, ತಾನು ಜಾತೀಯತೆ ಮತ್ತು ಲಿಂಗ ತಾರತಮ್ಯಕ್ಕೆ ಒಳಗಾಗಿದ್ದೆ. ತನ್ನನ್ನು ನಿರಂತರವಾಗಿ ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಆರೋಪಿಸಿದ್ದಾರೆ.

ಸಚಿವೆಯಾಗಿ ತಾನು ನೋಡಿಕೊಳ್ಳುತ್ತಿದ್ದ ಇಲಾಖೆಗಳಲ್ಲಿ ತಾನು ಮಾಡಿರುವ ಬದಲಾವಣೆಗಳು,ಅಭಿವೃದ್ಧಿಗಳು ಮತ್ತು ಸುಧಾರಣೆಗಳನ್ನು ಎತ್ತಿ ತೋರಿಸುವ ವಿವರವಾದ ವರದಿಯೊಂದನ್ನು ಶೀಘ್ರವೇ ಹೊರತರುವುದಾಗಿ ಅವರು ಹೇಳಿದರು.

ಇತರ ಖಾತೆಗಳ ಜೊತೆಗೆ ವಸತಿ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳನ್ನೂ ಅವರು ನಿರ್ವಹಿಸುತ್ತಿದ್ದರು.

ತಾನು ತನ್ನ ಕ್ಷೇತ್ರದ ಜನರಿಗೆ ಕೃತಜ್ಞಳಾಗಿರುವುದಾಗಿ ಪ್ರಿಯಾಂಕಾ ತಿಳಿಸಿದರು.ಅವರು ಶಾಸಕಿಯಾಗಿ ಮುಂದುವರಿಯಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News