ಪಂಜಾಬ್ | ಸುಖ್ ಬೀರ್ ಬಾದಲ್ ಗೆ ಸ್ವರ್ಣಮಂದಿರದಲ್ಲಿ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಿದ ಅಕಾಲ್ ತಖ್ತ್!
ಚಂಡೀಗಢ : 2007ರಿಂದ 2017ರ ನಡುವೆ ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳ ಸರಕಾರ ಮಾಡಿರುವ ತಪ್ಪಿಗೆ ಅಮೃತಸರದ ಸ್ವರ್ಣಮಂದಿರದಲ್ಲಿ ಸೇವಾಕರ್ತರಾಗಿ ಪಾತ್ರೆ ತೊಳೆಯಬೇಕು ಹಾಗೂ ಪಾದರಕ್ಷೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಸೋಮವಾರ ಶಿರೋಮಣಿ ಅಕಾಲಿ ದಳದ ನಾಯಕ ಸುಖ್ ಬೀರ್ ಬಾದಲ್ ಗೆ ಸಿಖ್ ಧಾರ್ಮಿಕ ಗುರುಗಳು ತಂಖಾ (ಧಾರ್ಮಿಕ ಶಿಕ್ಷೆ) ವಿಧಿಸಿದ್ದಾರೆ.
ಅಮೃತಸರದಲ್ಲಿನ ಸಿಖ್ಖರ ಅತ್ಯುನ್ನತ ಧಾರ್ಮಿಕ ಪೀಠವಾದ ಅಕಾಲ್ ತಖ್ತ್ ವೇದಿಕೆಯಿಂದ ಈ ಆದೇಶ ಹೊರಡಿಸಿದ ಜತೇದಾರ್ ಗ್ಯಾನಿ ರಗ್ಬೀರ್ ಸಿಂಗ್, ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಹುದ್ದೆಯಿಂದ ಸುಖ್ ಬೀರ್ ಬಾದಲ್ ರ ರಾಜೀನಾಮೆ ಪಡೆಯಬೇಕು ಹಾಗೂ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಹುದ್ದೆ ಹಾಗೂ ಪದಾಧಿಕಾರಿ ಹುದ್ದೆಗಳಿಗೆ ಇನ್ನು ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು ಎಂದೂ ಶಿರೋಮಣಿ ಅಕಾಲಿ ದಳದ ಕಾರ್ಯಕಾರಿ ಸಮಿತಿಗೆ ಸೂಚಿಸಿದರು.
ಇದರೊಂದಿಗೆ, ಸುಖ್ ಬೀರ್ ಬಾದಲ್ ರ ತಂದೆ ಹಾಗೂ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಬಾದಲ್ ಗೆ ಪ್ರದಾನ ಮಾಡಲಾಗಿದ್ದ ‘ಫಖ್ರೆ-ಎ-ಕವಾಮ್’ ಬಿರುದನ್ನು ಹಿಂಪಡೆಯುವ ನಿರ್ಧಾರವನ್ನೂ ಜತೇದಾರ್ ಪ್ರಕಟಿಸಿದರು.
2007ರಿಂದ 2017ರ ನಡುವೆ ಶಿರೋಮಣಿ ಅಕಾಲಿ ದಳ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಇನ್ನಿತರ ಸಿಖ್ ನಾಯಕರಿಗೂ ಐದು ಮಂದಿ ಸಿಖ್ ಧಾರ್ಮಿಕ ಗುರುಗಳು ಧಾರ್ಮಿಕ ಶಿಕ್ಷೆಯನ್ನು ಪ್ರಕಟಿಸಿದರು.
ಈ ಧಾರ್ಮಿಕ ಶಿಕ್ಷೆ ಪ್ರಕಟವಾಗುವುದಕ್ಕೂ ಮುನ್ನ, 2007ರಲ್ಲಿ ದೈವನಿಂದೆ ಮಾಡಿದ್ದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ರನ್ನು ಕ್ಷಮಿಸಿದ್ದೂ ಸೇರಿದಂತೆ ಶಿರೋಮಣಿ ಅಕಾಲಿ ದಳ ಸರಕಾರದ ಅವಧಿಯಲ್ಲಿ ನಡೆದಿದ್ದ ತಪ್ಪುಗಳನ್ನು ಸುಖ್ ಬೀರ್ ಬಾದಲ್ ಒಪ್ಪಿಕೊಂಡಿದ್ದರು.